ಮಂಗಳೂರು : ಕೋವೀಡ್ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಳವಾಗಿ ಈದ್ ಮಿಲಾದ್ ಆಚರಣೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ.
ಜಿಲ್ಲೆಯಾದ್ಯಂತ ಆಚರಿಸಲಿರುವ ಈದ್ ಮಿಲಾದ್‍ನಲ್ಲಿ ಸಾಮೂಹಿಕ ಮೆರವಣಿಗೆ ನಿಷೇಧಿಸಲಾಗಿದೆ. ಸುರಕ್ಷಿತ ಅಂತರ ಹಾಗೂ ಕೋವಿಡ್ ನಿಯಾಮಾವಳಿಗಳನ್ನು ಪಾಲಿಸಿಕೊಂಡು ಮಸೀದಿ ಹಾಗೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಪ್ರವಚನ ಮತ್ತು ರಾತ್ರಿಯ ಪ್ರವಚನ ಸಭೆ ಸಮಾರಂಭಗಳಲ್ಲಿ 100ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ. ಸುರಕ್ಷಿತ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ, ಒಂದು ವೇಳೆ ಹೆಚ್ಚು ಜನ ಆಗಮಿಸಿದ್ದಲ್ಲಿ ಎರಡು ಅಥವಾ ಹೆಚ್ಚಿನ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಹುದು.
ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ, ಡಿಜಿಟಲ್ ಸೌಂಡ್ ಸಿಸ್ಟಮ್ ಬಳಕೆಯನ್ನು ನಿಷೇಧಿಸಲಾಗಿದೆ. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ತಿಳಿಸಲಾಗಿದೆ.
ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವವರ ಮಧ್ಯ ಕನಿಷ್ಠ ಆರು ಅಡಿ ಅಂತರ ಇರಬೇಕು. ಮಸೀದಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡಬೇಕು. ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸುವವರು ತಮ್ಮ ಮನೆಗಳಿಂದ ಮುಸಲ್ಲಾವನ್ನು ಕಡ್ಡಾಯವಾಗಿ ತರಬೇಕು. ಪರಸ್ಪರ ಹಸ್ತಲಾಘವ ಮತ್ತು ಆಲಿಂಗನಗಳನ್ನು ಮಾಡುವಂತಿಲ್ಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.