ಮಂಗಳೂರಿನ ಖ್ಯಾತ ವಕೀಲ ಕೆ.ಎಸ್.ಎನ್ ರಾಜೇಶ್ ವಿರುದ್ಧ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ಆರೋಪ ; ಎಫ್.ಐ.ಆರ್. ದಾಖಲು – ಕಹಳೆ ನ್ಯೂಸ್
ದ.ಕ. : ಮಂಗಳೂರಿನ ಪ್ರಖ್ಯಾತ ವಕೀಲ, ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಿರುದ್ಧ ಇಂಟರ್ನ್ ಶಿಪ್ ನಲ್ಲಿದ್ದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ವಿದ್ಯಾರ್ಥಿನಿಯು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ವಕೀಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೆ.ಎಸ್.ಎನ್ ರಾಜೇಶ್ ಲೋಕಾಯುಕ್ತದಲ್ಲಿ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಳೆದ ಕೆಲವು ವರ್ಷಗಳಿಂದ ಸೇವೆ ನಡೆಸುತ್ತಿದ್ದರು.
ಲೋಕಾಯುಕ್ತ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ವಾದಿಸಲು ಸರಕಾರದಿಂದ ನೇಮಕಗೊಂಡ ವಕೀಲರಾಗಿದ್ದರು.
ರಾಜೇಶ್ ಕಚೇರಿಗೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಎಲ್‌ಎಲ್‌ಬಿ ವಿದ್ಯಾರ್ಥಿನಿ ಇಂಟರ್ನ್‌ಶಿಪ್‌ಗೆ ಬರುತ್ತಿದ್ದರು. ಸಂತ್ರಸ್ತೆ ಹಾಗೂ ವಕೀಲರ ನಡುವೆ ನಡೆದ ಫೋನ್ ಸಂಭಾಷಣೆಯೆಂದು ಹೇಳಲಾದ 11 ನಿಮಿಷ 55 ಸೆಕೆಂಡ್ಸ್ ಇರುವ ಆಡಿಯೋವೊಂದು ವೈರಲ್ ಆಗಿದೆ. ನಾನು ತಪ್ಪು ಮಾಡಿದ್ದೇನೆ, ಕ್ಷಮಿಸಿ ಬಿಡು ಎಂದು ಬೇಡಿಕೊಳ್ಳುವ ಆಡಿಯೋ ಕಳೆದ ಒಂದು ವಾರದಿಂದ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಆಡಿಯೋ ಆಧರಿಸಿ ವಕೀಲರ ವಿರುದ್ಧ ಕ್ರಮಕ್ಕೆ ಮಂಗಳೂರು ಎಬಿವಿಪಿ ಘಟಕ ಆಗ್ರಹಿಸಿತ್ತು. ಆಡಿಯೋದಲ್ಲಿ ಹಲವು ವಿಚಾರಗಳು ಬಹಿರಂಗಗೊಂಡಿದ್ದು, ನನ್ನ ಜೀವನದಲ್ಲಿ ಒಂದೇ ಒಂದು ಬಾರಿ ತಪ್ಪು ಮಾಡಿದ್ದೇನೆ. ನನ್ನ ತಪ್ಪು ಕ್ಷಮಿಸಿ ಇಂಟರ್ನ್‌ಶಿಪ್‌ಗೆ ದಯವಿಟ್ಟು ನೀನು ಮೊದಲಿನಂತೆ ನಮ್ಮ ಕಚೇರಿಗೆ ಬಾ. ಸಂಜೆ 6 ಗಂಟೆ ಬಳಿಕ ಕಚೇರಿಯಲ್ಲಿ ಕೆಲಸ ಮಾಡಬೇಡ’ ಎಂದು ಸಂತ್ರಸ್ತ ವಿದ್ಯಾರ್ಥಿನಿಗೆ ವಕೀಲ ರಾಜೇಶ್ ಭಟ್ ಕಾಡಿಬೇಡುತ್ತಿರುವುದು ಆಡಿಯೋದಲ್ಲಿ ದಾಖಲಾಗಿದೆ.