ಉಳ್ಳಾಲ ಸಮೀಪದ ಸೋಮೇಶ್ವರ ಬೀಚ್ ಉದ್ದಕ್ಕೂ ಲೇಟ್ ನೈಟ್ ಡಿಜೆ ಪಾರ್ಟಿ – ಸ್ಧಳೀಯರಿಗೆ ಪೊಲೀಸರಿಗೆ ದೂರು – ಕಹಳೆ ನ್ಯೂಸ್
ಮಂಗಳೂರು : ಉಳ್ಳಾಲ ಸಮೀಪದ ಸೋಮೇಶ್ವರ ಬೀಚ್ ಮತ್ತು ಬೀಚ್ ಉದ್ದಕ್ಕೂ ತಡ ರಾತ್ರಿ ತನಕವೂ ಸಭೆ, ಪಾರ್ಟಿಗಳನ್ನು ನಡೆಸಿ, ಡಿಜೆ ಹಾಕಿ ಶಬ್ದ ಮಾಲಿನ್ಯ ಉಂಟು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಉಳ್ಳಾಲ ರೈಲು ನಿಲ್ದಾಣದಿಂದ ತಲಪಾಡಿ ಬಟ್ಟಂಪಾಡಿವರೆಗಿನ ಬೀಚ್‍ನಲ್ಲಿ ಹಲವಾರು ಗೆಸ್ಟ್ ಹೌಸ್‍ಗಳು ಮತ್ತು ಕೆಲವು ರೆಸಾರ್ಟ್‍ಗಳು ಇದ್ದು, ಅಲ್ಲೆಲ್ಲ ರಾತ್ರಿ ವೇಳೆ ಸಭೆ, ಸಮಾರಂಭಗಳು, ಪಾರ್ಟಿಗಳು ನಡೆಯುತ್ತಿರುತ್ತವೆ. ಕೆಲವು ಪಾರ್ಟಿಗಳು ತಡ ರಾತ್ರಿ ಕಳೆದರೂ ನಡೆಯುತ್ತಿರುತ್ತವೆ. ಬಹುತೇಕ ಕಡೆ ಡಿಜೆ ಹಾಕಿ ಕರ್ಕಶ ಶಬ್ದ ಮಾಡಲಾಗುತ್ತದೆ. ಕೆಲವು ಬಾರಿ ಮುಂಜಾನೆ 4 ಗಂಟೆ ತನಕ ಪಾರ್ಟಿ ನಡೆದದ್ದಿದೆ ಎನ್ನುವುದು ಸ್ಥಳೀಯರ ಆರೋಪ ಮಾಡಿದ್ದಾರೆ.
ಈ ಬಗ್ಗೆ ನಾವು ಈ ಹಿಂದೆ ಉಳ್ಳಾಲ ಪೊಲೀಸರು, ಸೋಮೇಶ್ವರ ಪುರಸಭೆ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಇದುವರೆಗೂ ಕಟ್ಟು ನಿಟ್ಟಿನ ಕ್ರಮ ಆಗಿಲ್ಲ ಎಂದು ಸೋಮೇಶ್ವರ ಪರಿಸರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ಆರೋಪಿಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೆಂದು ಅವರು ಆಗ್ರಹಿಸಿದ್ದಾರೆ.