ದೀಪಾವಳಿ ಹಬ್ಬದಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಗೋಪೂಜೆ ಮಾಡುವಂತೆ ಕರ್ನಾಟಕ ಸರ್ಕಾರದಿಂದ ಆದೇಶ – ಕಹಳೆ ನ್ಯೂಸ್
ಬೆಂಗಳೂರು, ಅ 26 : ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಮುಜರಾಯಿ ಇಲಾಖೆಯ ಎಲ್ಲಾ ದೇವಸ್ಥಾನದಲ್ಲಿ ಗೋಪೂಜೆ ಮಾಡಲು ಆದೇಶಿಸಲಾಗಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾದ ಗೋವುಗಳ ಮಹತ್ವ ಹಾಗೂ ಗೋವುಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ನ. 5ರ ಬಲಿಪಾಡ್ಯಮಿಯಂದು ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆಯನ್ನು ಸಂಜೆ 5.30ರಿಂದ 6.30ರ ಗೋಧೂಳಿ ಲಗ್ನದಲ್ಲಿ ಪೂಜೆ ಮಾಡುವಂತೆ ಆದೇಶ ನೀಡಲಾಗಿದೆ.
ಹಿಂದೂ ಧರ್ಮದ ಪುರಾಣ, ಉಪನಿಷತ್ತುಗಳಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಗೋವಿಗೆ ಮಾತೆಯ ಸ್ಥಾನ ನೀಡಲಾಗಿದೆ. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜೊತೆ ವಾಸ್ತುದೋಷಕ್ಕೂ ಪರಿಹಾರ ದೊರೆಯುವುದೆಂಬ ನಂಬಿಕೆ ನಮ್ಮ ಸಮಾಜದಲ್ಲಿರುವುದರಿಂದ ಬಲಿಪಾಡ್ಯಮಿ ದಿನದಂದು ಇಲಾಖೆಯ ದೇವಾಲಯಗಳಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲು ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಪೂಜೆ ಮಾಡಿ, ತಿಂಡಿತಿನಿಸುಗಳನ್ನು ನೀಡುವ ಸಂಪ್ರದಾಯವು ಈಗಲೂ ನಡೆದು ಬಂದಿದೆ.