Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಬೆಂಗಳೂರುಸಿನಿಮಾಸುದ್ದಿ

ಭಜರಂಗಿ-2 ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆಗೆ ಮುಖ್ಯ ಪಾತ್ರದಲ್ಲಿ ಪುತ್ತೂರಿನ‌ ದೈತ್ಯ ಪ್ರತಿಭೆ ಬಪ್ಪಳಿಗೆ ನಿವಾಸಿ ಪ್ರಸನ್ನ ಭಾಗಿನ – ಕಹಳೆ ನ್ಯೂಸ್

ಪುತ್ತೂರು, ಅ.28 : ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ “ಭಜರಂಗಿ-2” ಸಿನಿಮಾ ಅಕ್ಟೋಬರ್ 29 ರಂದು ಬಿಡುಗಡೆಗೊಳ್ಳುತ್ತಿದ್ದು, ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆಗೆ ಪುತ್ತೂರಿನ‌ ದೈತ್ಯ ಪ್ರತಿಭೆಯೊಂದು ಮುಖ್ಯ ಪಾತ್ರದಲ್ಲಿ ನಟಿಸಿರುವುದು ಹೆಮ್ಮೆ ಎನ್ನಿಸಿದೆ.

ಪುತ್ತೂರು ಬಪ್ಪಳಿಗೆ ನಿವಾಸಿ ನಾರಾಯಣ ಗೌಡ ಹಾಗೂ ಭಾಗೀರಥಿ ದಂಪತಿಯ ಪುತ್ರ ಪ್ರಸನ್ನ ಭಾಗಿನ ಭಜರಂಗಿ -2 ಸಿನಿಮಾದಲ್ಲಿ ನಾಯಕ ನಟ ಶಿವರಾಜ್ ಕುಮಾರ್ ರವರ ಎದುರಾಳಿ ಜಾರ್ಗವನ ಪಾತ್ರದಲ್ಲಿ ನಟಿಸುತ್ತಿದ್ದು, ಟ್ರೇಲರ್ ನಲ್ಲಿ ಕಾಣಿಸಿಕೊಂಡ ಪ್ರಸನ್ನ ಅವರ ವೇಷಭೂಷಣವೇ ಅವರ ಪಾತ್ರದ ಮಹತ್ವವನ್ನು ವೈಭವೀಕರಿಸುತ್ತದೆ. ಇವರ ಸಹೋದರ ರಾಜ್ ಗೋಪಾಲ್ ಪುತ್ತೂರು ವಿಧಾನಸೌಧದಲ್ಲಿ ಸರ್ಕಾರಿ ನೌಕರನಾಗಿದ್ದರೆ, ಸಹೋದರಿ ‌ ಚಂದ್ರಲೇಖ ವಿವಾಹವಾಗಿ ಉಡುಪಿಗೆ ತೆರಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರೌಢಹಂತದವರೆಗಿನ ಶಿಕ್ಷಣ ಪಡೆದು ನಂತರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ ಪ್ರಸನ್ನ ಭಾಗಿನ ಶಾಲಾ ಹಂತದಲ್ಲಿಯೇ ನಟನೆಯ ಕುರಿತಾಗಿ ಒಲವು ಇರಿಸಿಕೊಂಡವರು. ಕಾಲೇಜು ವ್ಯಾಸಾಂಗದ ಬಳಿಕ ಪುತ್ತೂರಿನ ಆರ್ವಿ ಇಂಟರ್ ಗ್ರಾಫಿಕ್ಸ್ ನಲ್ಲಿ ಕೆಲ ಸಮಯ ಉದ್ಯೋಗದಲ್ಲಿದ್ದ ಇವರು, ಮೈಸೂರಿನ ವಿಪ್ರೋ ಸಂಸ್ಥೆಯಲ್ಲಿಯೂ ಕೆಲಸ‌ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಪ್ರಸನ್ನ ಅವರ 6.3 ಎತ್ತರದ ಶರೀರವನ್ನು ಗಮನಿಸಿದ ಆಪ್ತರೊಬ್ಬರು ಸಿನಿಮಾದಲ್ಲಿ ಹೀರೋ ಆಗಬಹುದಲ್ವಾ ಎಂದು ತಲೆಗೆ ಹುಳಬಿಟ್ಟರಂತೆ. ಈ ಬಗ್ಗೆ ಆರಂಭದಲ್ಲಿ ತಲೆಕೆಡಿಸಿಕೊಂಡು ಸಿನಿಮಾ ಲೋಕಕ್ಕೆ ಕಾಲಿಟ್ಟ ಇವರು, ಕಳೆದ ಏಳು ವರ್ಷಗಳಿಂದ ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು‌ ನಿರ್ವಹಿಸಿದ್ದಾರೆ. ಕೆಜಿಎಫ್, ಮಫ್ತಿ, ಕಿರಿಕ್ ಪಾರ್ಟಿ ಸಹಿತ ಹಲವು ಸಿನಿಮಾಗಳ ಸಣ್ಣ ಪುಟ್ಟ ಪಾತ್ರಗಳೂ ಕೂಡ ಇವರ ನಟನಾ ಸಾಮರ್ಥ್ಯವನ್ನು ಎತ್ತಿಹಿಡಿದಿದೆ. ಕಿರುತೆರೆಯಲ್ಲೂ ತನಗೆ ಸಿಕ್ಕ ಅವಕಾಶಕ್ಕೆ ಸಮನಾದ ಪ್ರತಿಭೆ ಮೆರೆದಿರುವ ಪ್ರಸನ್ನ ಬಾಗಿನ, ಉದಯ ಟಿವಿಯ ಜೈ ಹನುಮಾನ್ ಧಾರವಾಹಿಯಲ್ಲಿ ನಿರ್ವಹಿಸಿದ ಬಾಲಹನುಮನ ತಂದೆಯ ಪಾತ್ರ ಪ್ರೇಕ್ಷಕರ ಮನಸ್ಸುಗೆದ್ದಿದೆ. ಝೀ ಕನ್ನಡದ ಉಘೇ ಉಘೇ ಯಲ್ಲಿಯೂ ಗಮನೀಯ ಪಾತ್ರ ನಿರ್ವಹಿಸಿದ ಹಿರಿಮೆ ಇವರದಾಗಿದ್ದು, ಇದೇ ಮೊದಲ‌ ಬಾರಿಗೆ ಶಿವಣ್ಣ ಎದುರು ಖಳನಾಯಕನಾಗಿ ಮುಖ್ಯ ಪಾತ್ರಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಜರಂಗಿ-2 ರ ಗುರುತರ ಪಾತ್ರ ಜಾರ್ಗವ ನಾಗಿ ಕಾಣಿಸಿಕೊಳ್ಳುತ್ತಿರುವುದು ನನಗೆ ಹೆಮ್ಮೆಯ ವಿಚಾರ, ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆಗೆ ನನಗೆ ನಟಿಸುವ ಅವಕಾಶ ದೊರಕಿರುವುದು ನನ್ನ ಭಾಗ್ಯ ಎಂದು ಪ್ರಸನ್ನ ಭಾಗಿನ ಹೇಳಿದ್ದಾರೆ. ಪತ್ರಿಕೆಯ ಜೊತೆಗೆ ಮಾತನಾಡಿದ ಅವರು, ಶಾಲಾ-ಕಾಲೇಜು ದಿನಗಳಲ್ಲಿ ಶಿವಣ್ಣ ಅವರ ಚಿತ್ರಗಳನ್ನು ನೋಡಿ ಬೆಳೆದಿದ್ದ ನನಗೆ ಇದೀಗ,ಹರ್ಷ ಮಾಸ್ಟರ್ ಅವರಿಂದಾಗಿ ನನಗೆ ಶಿವಣ್ಣ ನಾಯಕ ನಟನಾಗಿರುವ ಭಜರಂಗಿ-2 ನಲ್ಲಿ ಜಾರ್ಗವ ನ ಪಾತ್ರದೊರಕಿದೆ. ಈ ಪಾತ್ರಕ್ಕಾಗಿ ಮೂರು ತಿಂಗಳ ಕಾಲ‌ ಅಭ್ಯಾಸ ನಡೆಸಿದ್ದೇನೆ, 6.3 ಅಡಿ ಎತ್ತರವಿರುವ ನಾನು, ಪ್ರಕಾಶ್ ಅವರ ಅದ್ಭುತ ಮೇಕಪ್ ಹಾಗೂ ವೇಷಭೂಷಣದಿಂದಾಗಿ 8 ಅಡಿಗಿಂತಲೂ ಎತ್ತರ ಕಾಣಿಸುತ್ತೇನೆ. ಶೂಟಿಂಗ್ ಸೆಟ್ ನಲ್ಲಿ ನನ್ನ ಪಾತ್ರದ ವೇಷಗಾರಿಕೆಯ ಬಗ್ಗೆ ಶಿವಣ್ಣ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಅವಧಿಯಲ್ಲಿ ನಿತ್ಯವೂ ನಿರಂತರ ಎರಡು ಗಂಟೆಗಳ ಮೇಕಪ್, ನಂತರದ ಅವಧಿಯ ಶೂಟಿಂಗ್ ಎಲ್ಲವನ್ನೂ ಶ್ರದ್ಧೆಯಿಂದ ನಿಭಾಯಿಸಿದ್ದೇನೆ ಎಂದರು.

ಕನ್ನಡ ಚಿತ್ರರಂಗದಲ್ಲಿ ಈವರೆಗೆ ನಡೆಯದ ಹಲವಾರು ಕ್ಲೈಮ್ಯಾಕ್ಸ್ ದೃಶ್ಯಗಳು, ಫೈಟಿಂಗ್,ತಂತ್ರಗಾರಿಕೆಯೊಂದಿಗೆ ಭಜರಂಗಿ -2 ಅದ್ಭುತ ಯಶಸ್ಸುಕಾಣಲಿದೆ. ಎಲ್ಲಾ ಪ್ರೇಕ್ಷಕರೂ ಸಿನಿಮಾ‌ ನೋಡಿ- ಪುತ್ತೂರ ಹುಡುಗನಿಗೂ ಪ್ರೋತ್ಸಾಹ ನೀಡುವಂತೆ ಪ್ರಸನ್ನ ಭಾಗಿನ ಮನವಿ ಮಾಡಿದ್ದಾರೆ.