ಮಂಗಳೂರು: ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರಿಬ್ಬರ ವೀಡಿಯೋವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿರುವ ಕಾಮುಕನೋರ್ವನನ್ನು ಪ್ರಯಾಣಿಕರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಪ್ಪಿನಮೊಗರುವಿನಲ್ಲಿ ನಡೆದಿದೆ.
ಆರೋಪಿಯನ್ನು ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಎಂದು ಗುರುತಿಸಲಾಗಿದ್ದು, ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದ ಆರೋಪಿ, ಚಾಲಕನ ಹತ್ತಿರದ ಕ್ಯಾಬಿನ್ ಸೀಟಲ್ಲಿ ಕುಳಿತಿದ್ದ ಯುವತಿಯರು ತಲಪಾಡಿಯಿಂದ ಮಂಗಳೂರು ಕಡೆಗೆ ಬಸ್ನಲ್ಲಿ ತೆರಳುತ್ತಿದ್ದ ವೇಳೆ ತನ್ನ ಮೊಬೈಲ್ ನಲ್ಲಿ ವೀಡಿಯೋವನ್ನು ಚಿತ್ರೀಕರಿಸಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕನೋರ್ವ ಆರೋಪಿಯ ಕೃತ್ಯವನ್ನು ಯುವತಿಯರ ಗಮನಕ್ಕೆ ತಂದಿದ್ದಾನೆ. ತಕ್ಷಣವೇ ವಿಷಯ ತಿಳಿದ ಇತರ ಪ್ರಯಾಣಿಕರು ಕಾಮುಕನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು, ಜಪ್ಪಿನಮೊಗರು ಎಂಬಲ್ಲಿ ಆತನನ್ನು ಬಸ್ ನಿಂದ ಇಳಿಸಿ ಥಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.