ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ಆರೋಪಿ ಕಾಸರಗೋಡಿನ ಜುಬೈರ್ ನ ಹೆಡೆಮುರಿಕಟ್ಟಿದ ಪುತ್ತೂರು ಮಹಿಳಾ ಠಾಣೆ ಪೋಲೀಸರು – ಕಹಳೆ ನ್ಯೂಸ್
ಪುತ್ತೂರು : ಅಪ್ರಾಪ್ತೆಯನ್ನು ಬೆದರಿಸಿ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಪರ್ಕ ಮಾಡಿರುವ ಬಗ್ಗೆ ಅಪ್ರಾಪ್ತೆಯೊಬ್ಬರು ನೀಡಿರುವ ದೂರಿನ ಮೇರೆಗೆ ಕಾಸರಗೋಡು ವಿದ್ಯಾ ನಗರದ ಜುಬೈರ್ ಎಂಬವನ ವಿರುದ್ಧ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಅಪ್ರಾಪ್ತ ಬಾಲಕಿಯು ಕಾಸರಗೋಡಿನ ತಾಯಿ ಮನೆಯಲ್ಲಿದ್ದಾಗ ಜುಬೈರ್ ಎಂಬಾತ ಬಾಲಕಿಯನ್ನು ನೋಡಿ ಇಷ್ಟಪಟ್ಟು ಆಕೆಯ ತಾಯಿಯಲ್ಲಿ ಆಕೆಯನ್ನು ಮದುವೆ ಮಾಡಿ ಕೊಡುವಂತೆ ಕೇಳಿಕೊಂಡಿದ್ದನು. ಇದಕ್ಕೆ ಆಕೆಯ ತಾಯಿ 18 ವರ್ಷವಾದ ಬಳಿಕ ಮದುವೆ ಮಾಡಿಕೊಡುವುದಾಗಿ ತಿಳಿಸಿದ್ದರು. ಬಳಿಕ ಜುಬೈರ್ ಬಾಲಕಿಯೊಡನೆ ನಿರಂತರ ಫೋನ್ ಸಂಪರ್ಕದಲ್ಲಿದ್ದು ಮಾತನಾಡಿಸುತ್ತಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರದ ದಿನಗಳಲ್ಲಿ ಪುತ್ತೂರು ತಾಲೂಕು ಆರ್ಯಾಪು ಗ್ರಾಮದಲ್ಲಿ ವಾಸವಿದ್ದ ಬಾಲಕಿಯ ಮನೆಯ ಬಳಿ ತಡರಾತ್ರಿ 12 ಗಂಟೆಗೆ ಬಂದು ಬಾಗಿಲು ತೆಗೆಯುವಂತೆ ಒತ್ತಾಯಿಸಿ ನಂತರ ಬಾಲಕಿ ಬಾಗಿಲು ತೆರೆದ ಸಂದರ್ಭ ಆಕೆ ಕಿರುಚಿಕೊಳ್ಳದಂತೆ ಆಕೆಯ ಬಾಯನ್ನು ತನ್ನ ಕೈಯಿಂದ ಮುಚ್ಚಿ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಮಾಡಿರುವುದಾಗಿ, ಈ ವಿಚಾರವನ್ನು ಯಾರಿಗೂ ಹೇಳಬಾರದು, ಒಂದು ವೇಳೆ ಹೇಳಿದ್ದಲ್ಲಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ ಹಾಗೂ ಮುಂದೆಯೂ ಮನೆಗೆ ಬರುವುದಾಗಿ ಹೇಳಿದ್ದು ಇದಕ್ಕೆ ಬಾಲಕಿಯು ಒಪ್ಪದೇ ಇದ್ದಾಗ ಅವಳೊಡನೆ ಗಲಾಟೆ ನಡೆಸಿರುತ್ತಾನೆಂದು ಬಾಲಕಿ ನೀಡಿದ ದೂರಿನಲ್ಲಿ ಆರೋಪಿಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಮಹಿಳಾ ಪೋಲಿಸ್ ಠಾಣೆ ಪುತ್ತೂರಿನಲ್ಲಿ ಅ. ಕ್ರ 38/2021 ಕಲಂ 376 ಐಪಿಸಿ ಮತ್ತು ಕಲಂ 4 ಪೋಕ್ಸೋ ಕಾಯಿದೆ 2012ರಂತೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಬೆನ್ನು ಹತ್ತಿದ ಪೋಲೀಸರು ಆರೋಪಿಯನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.