ಪುತ್ತೂರು: 6 ವರ್ಷಗಳ ಹಿಂದೆ ನಡೆದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ- ಕಹಳೆ ನ್ಯೂಸ್
ಪುತ್ತೂರು: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದಲ್ಲಿ 6 ವರ್ಷಗಳ ಹಿಂದೆ ನಡೆದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಅರೋಪಿಯನ್ನು ಅಪರಾಧಿ ಎಂದು ಪರಿಗಣಿಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜಾಲ್ಸೂರು ಗ್ರಾಮದ ಸತೀಶ್ ಎಂಬಾತ 2015ರ ಡಿ.20ರಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯನ್ನು ಚಾಕಲೇಟ್ ಮತ್ತು ಐಸ್‍ಕ್ರೀಂ ಕೊಡುವುದಾಗಿ ಹೇಳಿ ಮನೆಯೊಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿತ್ತು.
ಬಾಲಕಿಯ ತಾಯಿ ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಅವರು ಪ್ರಕರಣಕ್ಕೆ ಸಂಬಂಧಿಸಿ 16 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದರು. ಬಳಿಕ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಹಾಗೂ 25 ಸಾವಿರ ರೂ. ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ ಮತ್ತೆ 1 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 20 ಸಾವಿರ ರೂ. ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕು.
ದ.ಕ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು 1ಲಕ್ಷ ರೂ. ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.