ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾನುವಾರ ನಡೆದ ರಕ್ಷಕ- ಶಿಕ್ಷಕ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ನಿರಂತರ ಅಭ್ಯಾಸವು ಮಕ್ಕಳನ್ನು ಪರಿಪೂರ್ಣರನ್ನಾಗಿ ಮಾಡುತ್ತದೆ. ಫಲಿತಾಂಶ ಬಂದ ಮೇಲೆ ಪಶ್ಚಾತ್ತಾಪ ಪಡುವ ಬದಲು ಸಿಕ್ಕಿರುವ ಸಮಯವನ್ನು ಸರಿಯಾಗಿ ಸಧ್ವಿನಿಯೋಗಿಸಿಕೊಳ್ಳಬೇಕು. ಪಿಯುಸಿ ಎಂಬ 2 ವರ್ಷದ ಕೋರ್ಸ್‍ನಲ್ಲಿ ತುಂಬಾ ಶ್ರದ್ಧೆಯಿಂದ ತಮ್ಮ ಎಲ್ಲಾ ಶಕ್ತಿ ಸಾಮಥ್ರ್ಯಗಳನ್ನು ಬಳಸಿಕೊಂಡು ಅಧ್ಯಯನ ಮಾಡಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯಂತ ಒತ್ತಡವನ್ನು ಮಕ್ಕಳಿಗೆ ಪೋಷಕರು ಹೇರುವುದು ಅಥವ ಮಕ್ಕಳೇ ತಮ್ಮ ಮೇಲೆ ಹೇರಿಕೊಳ್ಳುವುದು ಸರಿಯಲ್ಲ. ದೋಣಿ ನೀರಿನಲ್ಲಿ ಹೋಗಬೇಕೆ ವಿನಃ ನೀರು ದೋಣಿಯೊಳಗೆ ಹೋಗಬಾರದು ಎಂಬ ಮಾತಿನಂತೆ ಮಕ್ಕಳು ತಾವು ಒತ್ತಡಗಳನ್ನು ಮೈಮೇಲೆ ಎಳೆದುಕೊಂಡು ಅದರೊಳಗೆ ಮುಳುಗಿ ಹೋಗಬಾರದು. ತಮ್ಮ ಪಾಲಿಗೆ ಬಂದಿರುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿಷ್ಠೆಯಿಂದ ನಿಭಾಯಿಸಬೇಕು ಎಂದರು. ಮಕ್ಕಳು ಬರೀ ಡಾಕ್ಟರ್ ಇಂಜಿನಿಯರ್ ಆಗುವುದಲ್ಲದೆ ಈ ಆಧುನಿಕ ಯುಗದಲ್ಲಿ ಇನ್ನೂ ಸಾಕಷ್ಟು ವಿಫುಲ ಅವಕಾಶಗಳು ಮಕ್ಕಳಿಗಿವೆ. ಮಕ್ಕಳು ತಮ್ಮ ಸಾಮಥ್ರ್ಯವನ್ನು ಅರಿತುಕೊಂಡು ತಮ್ಮ ಗುರಿ ಸಾಧನೆ ಮಾಡಬೇಕು. ಅಂತೆಯೇ ತಮ್ಮ ಮಕ್ಕಳನ್ನು ಯಾರೊಂದಿಗೂ ಹೋಲಿಕೆ ಮಾಡದೆ ಅವರ ಸಾಮಥ್ರ್ಯನುಸಾರ ಸಾಧನೆಗೈಯಲು ಹೆತ್ತವರು ಪ್ರೇರೇಪಿಸಬೇಕು ಎಂದರಲ್ಲದೆ ಮಕ್ಕಳು ಅಪ್ಪ-ಅಮ್ಮ ದುಡಿದು ವಿದ್ಯಾಸಂಸ್ಥೆಗಳಿಗೆ ಕಟ್ಟಿರುವ ಹಣಕ್ಕೆ ಸರಿಯಾದ ನ್ಯಾಯ ಒದಗಿಸಬೇಕು. ಶ್ರದ್ಧೆ, ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡಿದ ಕೆಲಸ ಯಶಸ್ಸನ್ನು ತಂದುಕೊಡುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಅಂಬಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ರಾಷ್ಟ್ರ ಪ್ರೇಮಿಗಳಾಗಿ ಹೊರಹೊಮ್ಮಬೇಕು. ಇದುವೇ ಅಂಬಿಕಾ ಸಂಸ್ಥೆಯ ಪ್ರಮುಖ ಧ್ಯೇಯ. ಮಕ್ಕಳಿಗೆ ಪಠ್ಯ- ಚಟುವಟಿಕೆಗಳ ಜೊತೆಗೆ ದೇಶಭಕ್ತಿ ಹಾಗೂ ದೈವಭಕ್ತಿ ತಮ್ಮಲ್ಲಿ ಅಳವಡಿಸಿಕೊಳ್ಳಲು ಪೂರಕವಾಗುವಂತೆ ಅಂಬಿಕಾ ಸಂಸ್ಥೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಯಾಂಪಸ್ ನಿರ್ದೇಶಕ ಭಾಸ್ಕರ್ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಉಪನ್ಯಾಸಕ ವೃಂದದವರು, ವಸತಿ ನಿಲಯದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಎಸ್.ಎನ್ ಭಟ್, ಎಸ್. ಎನ್. ಭಟ್ ಸ್ವಾಗತಿಸಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ನಮೃತ್ ಜಿ ಉಚ್ಚಿಲ್ ವಂದಿಸಿದರು. ಗಣಿತಶಾಸ್ತ್ರ ಉಪನ್ಯಾಸಕ ತಿಲೋಶ್ ಕುಮಾರ್ ನಿರೂಪಿಸಿದರು.