ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೀಪಾವಳಿ ಕೇವಲ ಪಟಾಕಿ ಹೊಡೆಯುವುದು, ದೀಪ ಉರಿಸುವುದು ಮೇಲ್ನೋಟಕ್ಕೆ ಕಂಡುಬಂದರೂ ಈ ಹಬ್ಬದ ಹಿಂದೆ ಹಲವು ಪುರಾಣಕಾಲದ ಕಥೆ, ಸಂಪ್ರದಾಯ, ಸಂಸ್ಕೃತಿ ಇದೆ. ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು ಅಜ್ಞಾನವೆಂಬ ಕತ್ತಲೆಯನ್ನು ಅಳಿಸಿ ಬೆಳಕೆಂಬ ಜ್ಞಾನವನ್ನು ಪಸರಿಸುವ ಬೆಳಕಿನ ಹಬ್ಬವಾಗಿದೆ ಎಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ವಿದ್ಯಾರ್ಥಿಗಳ ಜೊತೆಗೂಡಿ ದೀಪ ಪ್ರಜ್ವಲನೆ ಮಾಡಿ, ಕಥೆಯ ಮೂಲಕ ವಿವರಿಸಿದರು. ನಂತರ ವಿದ್ಯಾರ್ಥಿಗಳೆಲ್ಲರೂ ಹಣತೆ ಹಚ್ಚಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು.