Friday, September 20, 2024
ರಾಜಕೀಯ

ವೇದ ಶಿಬಿರಾರ್ಥಿಗಳಿಗೆ ಜೈವಿಕ ಪರಿಸರ ಸಂರಕ್ಷಣೆಯ ಮಾಹಿತಿ ಕಾರ್ಯಾಗಾರ – ಕಹಳೆ ನ್ಯೂಸ್

ಸುಳ್ಯ: ವೇದ, ಯೋಗ ಮತ್ತು ಕಲೆಗಳ ಉಳಿವಿಗೆ ಅವಿಶ್ರಾಂತ ಪ್ರಯತ್ನ ನಡೆಸುತ್ತಿರುವ ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನವು ಪ್ರತೀ ವರ್ಷ ಬೇಸಿಗೆ ರಜೆಯಲ್ಲಿ ಆಯೋಜಿಸುತ್ತಿರುವ ವೇದ ಶಿಬಿರದಲ್ಲಿ ವೇದದ ಜೊತೆಗೆ ಕಲೆ, ಸಂಸ್ಕೃತಿ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ಬಾರಿಯ ಶಿಬಿರದ ವಿಶೇಷ ಆಕರ್ಷಣೆಯಾಗಿ ಶಿಬಿರಾರ್ಥಿಗಳಿಗೆ ಜೈವಿಕ ಪರಿಸರ ಸಂರಕ್ಷಣೆಯ ಕುರಿತಾದ ‘ಹಾವು-ನಾವು-ಪರಿಸರ’ ಅನ್ನುವ ವಿಶೇಷ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಖ್ಯಾತ ಉರಗತಜ್ಞ, ಉರಗಪ್ರೇಮಿ ಹಾಗೂ ವಿಷ ಚಿಕಿತ್ಸಾ ತಜ್ಞರಾದ ಪುತ್ತೂರಿನ ಡಾ| ರವೀಂದ್ರನಾಥ ಐತಾಳರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟು, “ಹಾವುಗಳು ಪರಿಸರ ಸ್ನೇಹಿಯಾಗಿರುವ ಜೀವಿಗಳಾಗಿದ್ದು, ಕೃಷಿಭೂಮಿ ಹಾಗೂ ಪರಿಸರ ಸಮತೋಲನ ಕಾಪಾಡುವಲ್ಲಿ ಇದರಿಂದ ಬಹಳಷ್ಟು ಪ್ರಯೋಜನವಿದೆ. ಯಾವುದೇ ವಿಷಕಾರಿ ಹಾವುಗಳು ಕೂಡಾ ತಮ್ಮ ಪ್ರಾಣಕ್ಕೆ ಅಪಾಯ ಉಂಟಾದ ಸಂದರ್ಭದಲ್ಲಿ ಮಾತ್ರವೇ ಮನುಷ್ಯನಿಗೆ ಕಚ್ಚುತ್ತದೆಯೇ ಹೊರತು, ಅದರ ಪಾಡಿಗೇ ಇರುವಂತಾದಲ್ಲಿ ಅದರಿಂದ ಯಾವ ಅಪಾಯವೂ ಇರುವುದಿಲ್ಲ. ಹಾವುಗಳ ಕುರಿತಾಗಿ ವ್ಯರ್ಥ ಭಯವನ್ನು ಬಿಟ್ಟು ಉರಗ ಸಂಕುಲವನ್ನು ಪ್ರೀತಿಸಿ, ಉಳಿಸಿ ಬೆಳೆಸುವಲ್ಲಿ ಮುಂದಿನ ಪೀಳಿಗೆಯವರು ಕಾಳಜಿ ವಹಿಸಬೇಕು” ಎಂದು ಮಕ್ಕಳಲ್ಲಿ ಜೈವಿಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.

ಜಾಹೀರಾತು

ತಮ್ಮ ಮನೆಯಲ್ಲೇ ವಿವಿಧ ಜಾತಿಯ ಹಾವುಗಳನ್ನು ಸಾಕುತ್ತಾ ಅದ್ಭುತವಾದ ಉರಗಲೋಕವನ್ನೇ ಸೃಷ್ಟಿಸಿರುವ ಐತಾಳರು ಅದೆಷ್ಟೋ ಜಾತಿಯ ಹಾವುಗಳನ್ನು ಹಿಡಿದು ಕಾಡಿಗೆ ಮರಳಿಸಿ ಉರಗ ಸಂಕುಲದ ಉಳಿವಿಗೆ ಶ್ರಮಿಸುತ್ತಿದ್ದಾರೆ. ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ತಂದಿದ್ದ ಹಾವುಗಳನ್ನು ಕೈಯಲ್ಲಿ ಹಿಡಿದು ಆನಂದಿಸಿದ ಮಕ್ಕಳು ಜೈವಿಕ ಪರಿಸರಕ್ಕೆ ಯಾವುದೇ ಹಾನಿಯನ್ನುಂಟುಮಾಡದೆ ಅವುಗಳನ್ನು ಉಳಿಸಿ ಬೆಳೆಸುವುದಾಗಿ ಸಂಕಲ್ಪ ಕೈಗೊಂಡರು.

ಈ ಕಾರ್ಯಾಗಾರದ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಬ್ರಹ್ಮಶ್ರೀ ವೇ| ಮೂ| ಪುರೋಹಿತ ನಾಗರಾಜ ಭಟ್ ಹಾಗೂ ಶಿಬಿರದ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದು, ನೂರಾರು ಶಿಬಿರಾರ್ಥಿಗಳು ಮತ್ತು ಪೋಷಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.