ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸದ ಬೆನ್ನಿಗೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಯುತ್ತಿದೆ. ಈಗಾಗಲೇ ಗುಪ್ತಚರ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ನೂತನ ಸರ್ಕಾರವು ಇದೀಗ ಆಯಕಟ್ಟಿನ ಹುದ್ದೆಗಳಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇದೀಗ ಚಿಕ್ಕಮಗಳೂರು ಎಸ್ಪಿಯಾಗಿದ್ದ ಅಣ್ಣಾಮಲೈ ಅವರನ್ನು ಕುತೂಹಲದ ಕೇಂದ್ರಬಿಂದು ಈಗಲ್ ಟನ್ ರೆಸಾರ್ಟ್ ಇರುವ ರಾಮನಗರ ಜಿಲ್ಲಾ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಸಂಜೆಯ ವೇಳೆಗಷ್ಟೇ ಸರ್ಕಾರವು ಈಗಲ್ ಟನ್ ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಹಿಂದೆತೆದುಕೊಂಡಿತ್ತು.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಪೊಲೀಸರಂತೆ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಪ್ರತಿಯೊಂದು ವಾಹನಗಳನ್ನು ಕೂಡ ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದರು. ಜೊತೆಗೆ ರೆಸಾರ್ಟ್ ಒಳಗಿದ್ದ ಶಾಸಕರು ರೆಸಾರ್ಟ್ ನಿಂದ ಹೊರಬಾರದಂತೆ ಕಾವಲು ಕಾಯುತ್ತಿದ್ದರು ಎನ್ನಲಾಗಿದೆ.
ಇದೀಗ ರೆಸಾರ್ಟ್ ಮೇಲೆ ರಾಜ್ಯ ಬಿಜೆಪಿಯು ಗುಪ್ತಚರ ಇಲಾಖೆಯ ಮೂಲಕ ಹದ್ದಿನ ಕಣ್ಣಿಟ್ಟಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿಯೇ ಎಸ್ಪಿ ಅಣ್ಣಾಮಲೈ ಅವರನ್ನು ಬಿಡದಿ ವ್ಯಾಪ್ತಿಯ ರಾಮನಗರ ಜಿಲ್ಲೆ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.