Breaking News : ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಬಿಜೆಪಿ ಬಹುಮತ ಸಾಬೀತು ಪಡಿಸುವುದು ಅಷ್ಟೇ ಸತ್ಯ – ಕಹಳೆ ನ್ಯೂಸ್
ಬೆಂಗಳೂರು : ಸುಪ್ರೀಂ ಕೋರ್ಟು ಬಹುಮತ ಸಾಬೀತು ಪಡಿಸಲು ಬಿಜೆಪಿಗೆ ನಾಳೆಯ ವರೆಗೆ ಗಡುವು ನೀಡಿದೆ. ಇದನ್ನು ಸ್ವಾಗತಿಸಿದ ಬಿಜೆಪಿ, ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಬಿಜೆಪಿ ಬಹುಮತ ಸಾಬೀತು ಪಡಿಸುವುದು ಅಷ್ಟೇ ಸತ್ಯ ಎಂದು ಹೇಳಿದೆ.
ಹಿನ್ನಲೆ :
ನಾಳೆ ಸಂಜೆ 4 ಗಂಟೆಯ ಒಳಗೆ ವಿಶ್ವಾಸಮತ ಸಾಬೀತು ಮಾಡಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದೆ.
ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು ಎಂದು ಕೋರಿ ಕಾಂಗ್ರೆಸ್–ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್.ಎ. ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರಿದ್ದ ತ್ರಿಸದಸ್ಯ ಪೀಠ ನಡೆಸಿದ್ದರು. ಇದೀಗ ಕರ್ನಾಟಕದ ರಾಜ್ಯಪಾಲರು ಯಾವ ಆಧಾರದ ಮೇಲೆ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರು ಎಂದು ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ನಾಳೆಯೇ ವಿಶ್ವಾಸಮತ ಸಾಬೀತುಪಡಿಸಲು ಸಿದ್ಧ ಎಂದು ಜೆಡಿಎಸ್– ಕಾಂಗ್ರೆಸ್ ಪರ ವಕೀಲರು ಸುಪ್ರಿಂ ಕೋರ್ಟ್‌ಗೆ ತಿಳಿಸಿದ್ದು, ಇದಾದ ಬಳಿಕ, ವಿಶ್ವಾಸಮತ ಸಾಬೀತುಪಡಿಸಲು ನಾವೂ ಸಿದ್ಧ ಎಂದು ಬಿಜೆಪಿ ಪರ ವಕೀಲರು ತಿಳಿಸಿದ್ದಾರೆ.
ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಸೂಚಿಸಲು ಸುಪ್ರೀಂ ಕೋರ್ಟ್ ಇಂಗಿತ ವ್ಯಕ್ತಪಡಿಸಿದೆ. ಆದರೆ, ಯಡಿಯೂರಪ್ಪ ಪರ ವಕೀಲ ರೋಹಟಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಹುಮತ ಸಾಬೀತಿಗೆ ನಮ್ಮ ಸದಸ್ಯರು ಸಿದ್ಧ ಎಂದು ಕಾಂಗ್ರೆಸ್ ವಕೀಲ ಸಿಂಘ್ವಿ ತಿಳಿಸಿದ್ದಾರೆ. ಅದಕ್ಕೆ, ರೋಹಟಗಿ ವಿರೋಧ ವ್ಯಕ್ತಪಡಿಸಿದರು. ಶನಿವಾರವೇ ಬಹುಮತ ಸಾಬೀತುಪಡಿಸಲಿ ಎಂಬ ಕಾಂಗ್ರೆಸ್ ಕೋರಿಕೆಗೆ ಶನಿವಾರ, ಭಾನುವಾರ ಬೇಡ ಎಂದು ರೋಹಟಗಿ ತಿಳಿಸಿದ್ದಾರೆ. ಆದರೆ, ಇದನ್ನು ಪೀಠ ತಿರಸ್ಕರಿಸಿದೆ. ನಾಳೆ ಸಂಜೆ 4ಕ್ಕೆ ಬಹುಮತ ಸಾಬೀತಿಗೆ ಪೀಠ ಸಮಯ ನಿಗದಿ ಮಾಡಿದೆ.