Sunday, November 24, 2024
ಸುದ್ದಿ

ಸಾಹಿತಿ, ಪ್ರಾಧ್ಯಾಪಕ ಡಾ.ಶ್ರೀಧರ ಎಚ್.ಜಿ ಅವರ ಪ್ರಸ್ಥಾನ ಕಾದಂಬರಿ ಲೋಕಾರ್ಪಣೆ-ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬನ ಜೀವನವೂ ನಿಗದಿತ ಸಮಯದೊಳಗೆ ಆಗಿ ಹೋಗುವುದು ಹೌದಾದರೂ ಅಂತಹ ಜೀವನದಲ್ಲಿ ಸಮಾಜ ಗುರುತಿಸಬಹುದಾದ ಹೆಗ್ಗುರುತನ್ನು ಮೂಡಿಸುವುದು ಸಾಧನೆ ಎನಿಸಿಕೊಳ್ಳುತ್ತದೆ. ಅಂತಹ ನೆಲೆಯಿಂದ ಸಾಹಿತ್ಯವನ್ನೂ ಸಾಧನೆಯ ಮಜಲಾಗಿ ಕಾಣಬಹುದು. ಸಾಹಿತ್ಯದಲ್ಲೂ ಜಲ ಸಾಹಿತ್ಯ, ನೆಲ ಸಾಹಿತ್ಯ, ಪ್ರಾಕೃತಿಕ ಸಾಹಿತ್ಯವೇ ಮೊದಲಾದ ನಾನಾ ಬಗೆಯ ವೈವಿಧ್ಯಮಯ ಸಾಹಿತ್ಯ ಪರಂಪರೆಗಳು ಕಾಣಿಸಲಾರಂಭಿಸಿವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಹೇಳಿದರು.

ಪುತ್ತೂರಿನ ನೆಹರುನಗರದಲ್ಲಿನ ಕಾಡು ಬಳಗದ ಆಶ್ರಯದಲ್ಲಿ ಕಾಡು ಬಯಲು ಮಂದಿರದಲ್ಲಿ ಸಾಹಿತಿ ಮತ್ತು ಕನ್ನಡ ಪ್ರಾಧ್ಯಾಪಕ ಡಾ.ಶ್ರೀಧರ ಎಚ್.ಜಿ ಅವರ ಪ್ರಸ್ಥಾನ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ.ಶ್ರೀಧರ್ ಅವರ ಕಾದಂಬರಿಯಲ್ಲಿ ನಾಟಕೀಯತೆ ಅದ್ಭುತವಾಗಿ ಮೂಡಿಬಂದಿದೆ. ಭೂತಕಾಲ, ವರ್ತಮಾನ ಕಾಲ ಹಾಗೂ ಭವಿಷ್ಯತ್ ಕಾಲದ ನಡುವೆ ಸುಲಲಿತವಾದ ಹೊಂದಾಣಿಕೆಯನ್ನು ತರುವುದೇ ಕಾದಂಬರಿಕಾರನ ನಿಜವಾದ ಸಾಮಥ್ರ್ಯ. ಅಂತಹ ಶಕ್ತಿ ಶ್ರೀಧರ ಎಚ್.ಜಿ ಅವರಲ್ಲಿದೆ ಎಂಬುದು ಪ್ರಸ್ಥಾನ ಕಾದಂಬರಿಯನ್ನು ಓದುವಾಗ ಅರಿವಾಗುತ್ತದೆ. ಸಣ್ಣ ಸಣ್ಣ ವಿಚಾರಗಳನ್ನೂ ಬಿಡದೆ ಕಾದಂಬರಿಯನ್ನು ಸಮೃದ್ಧಗೊಳಿಸಲಾಗಿರುವುದು ಹಾಗೂ ಆ ಎಲ್ಲ ವಿಚಾರಗಳಿಗೂ ಮೌಲ್ಯವನ್ನು ತುಂಬಿರುವುದು ಕಾದಂಬರಿಕಾರನ ಹೆಚ್ಚುಗಾರಿಕೆ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮನುಷ್ಯ ಮತ್ತು ಪ್ರಕೃತಿ ಒಬ್ಬರಿಗೊಬ್ಬರು ಪೂರಕರು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಾನಾ ಸಂಗತಿಗಳು, ಘಟನೆಗಳು ನಡೆಯುತ್ತಿವೆ. ಇದರ ಪರಿಣಾಮವಾಗಿ ಅನೇಕ ಭಾವನಾತ್ಮಕ ಸಂಗತಿಗಳು ಕಮರಿಹೋಗುತ್ತವೆ. ಪ್ರಸ್ಥಾನ ಕಾದಂಬರಿ ಜಲಾಶಯ ನಿರ್ಮಾಣದ ಕಾರಣದಿಂದಾಗಿ ಊರೊಂದು ಮುಳುಗಡೆಯಾಗುವ ಕಥಾನಕದ ಸುತ್ತ ಬೆಳೆದುಬರುತ್ತದೆ. ಹಾಗೆಯೇ ಕಾದಂಬರಿ ಓದುಗನನ್ನು ಗಾಢವಾಗಿ ಆಕ್ರಮಿಸಿಕೊಳ್ಳುತ್ತದೆ. ಪರಿಣಾಮವಾಗಿ ಕಾದಂಬರಿ ಅಲ್ಲಲ್ಲಿ ಓದುಗನನ್ನು ಕಣ್ಣೀರಾಗಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ ಮಾತನಾಡಿ ಡಾ.ಶ್ರೀಧರ ಎಚ್.ಜಿ ತನ್ನ ಬರಹ ಮತ್ತು ಬದುಕು ಎರಡನ್ನೂ ಪರಿಪೂರ್ಣತೆತೆಯೆಡೆಗೆ ಒಯ್ಯಲು ಪ್ರಯತ್ನಿಸುತ್ತಿರುವ ಸಾಹಿತಿ. ಭಾರತದ ಮೇಲೆ ರಾಜಕೀಯ ದಾಳಿ, ಆರ್ಥಿಕ ದಾಳಿ, ಅಭಿವೃದ್ಧಿಯ ದಾಳಿಯೇ ಮೊದಲಾದ ಅನೇಕ ದಾಳಿಗಳಾಗಿವೆ. ಆ ಎಲ್ಲಾ ಸಂದರ್ಭಗಳಲ್ಲೂ ಭಾರತವನ್ನು ಉಳಿಸಿರುವುದು ಪ್ರೀತಿ ಮತ್ತು ಪ್ರಜ್ಞೆ. ಡಾ.ಶ್ರೀಧರ ಅವರ ಕಾದಂಬರಿ ಕೇವಲ ಮುಳುಗಿದ್ದಷ್ಟನ್ನೇ ಕಟ್ಟಿಕೊಡುವುದಿಲ್ಲ ಬದಲಾಗಿ ಮುಳುಗಿದ ಬದುಕು ಮತ್ತೆ ಪುಟಿದೆದ್ದು ಬೆಳೆದದ್ದನ್ನೂ ತಿಳಿಸಿಕೊಡುತ್ತದೆ ಎಂದು ನುಡಿದರು.

ಕೃತಿಕಾರ ಡಾ.ಶ್ರೀಧರ ಎಚ್.ಜಿ.ಮಾತನಾಡಿ ಕೋರೋನಾ ಸಂದರ್ಭದಲ್ಲಿ ತುಂಬಾ ವಿಷಾದ ಎಲ್ಲೆಡೆಯೂ ಮನೆಮಾಡಿತ್ತು. ಅದೇ ಕಾಲದಲ್ಲಿ ತನ್ನ ಮನಸ್ಸಿಗೂ ನೋವಾಗುವಂತಹ ಘಟನೆಗಳು ನಡೆದವು. ಇವೆಲ್ಲವೂ ಕೂಡಿ ಕಾದಂಬರಿ ಬರೆಯುವ ಮನಃಸ್ಥಿತಿ ಸಿದ್ಧಗೊಂಡಿತು. ಕಾದಂಬರಿಯ ಸಾಲು ಸಾಲುಗಳನ್ನೂ ಅನುಭವಿಸಿ ಬರೆದಿದ್ದೇನೆ. ಹಾಗಾಗಿಯೇ ಕೆಲವೊಂದು ಪಾತ್ರಗಳನ್ನು ಚಿತ್ರಿಸುವಾಗ ಕಣ್ಣ ಹನಿ ಜಾರುತ್ತಿತ್ತು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ನಿರಂಜನ ವಾನಳ್ಳಿ ಮಾತನಾಡಿ ಅಭಿವೃದ್ಧಿ ಯೋಜನೆಯ ಪರಿಣಾಮವಾಗಿ ಎಲ್ಲವನ್ನೂ ದುಡ್ಡಿನ ನೆಲೆಯಲ್ಲಿ ಕಾಣುವ ಪ್ರವೃತ್ತಿ ಬೆಳೆಯಲಾರಂಭಿಸಿದೆ. ಆದರೆ ಅಭಿವೃದ್ಧಿಯ ಧಾವಂತದಲ್ಲಿ ಕಳೆದುಹೋಗುವ ಸಂಸ್ಕøತಿ, ಸಾಯುವ ಭಾವನೆಗಳ ಬಗೆಗೆ ಗಮನವೇ ಇಲ್ಲದಂತಾಗಿದೆ. ಜನರ ವಲಸೆಯನ್ನು ಸರ್ಕಾರ ಕೇವಲ ತನ್ನ ಕಣ್ಣಿನಿಂದಷ್ಟೇ ಕಾಣುತ್ತದೆ. ಆದರೆ ಜನರ ದೃಷ್ಟಿಯಿಂದ, ಪ್ರಾಣಿ ಪಕ್ಷಿಗಳ ದೃಷ್ಟಿಯಿಂದಲೂ ಕಾಣಬೇಕಿದೆ. ಡಾ.ಶ್ರೀಧರ ಅವರಲ್ಲಿ ಕಾದಂಬರಿಕಾರನಿಗಿರಬೇಕಾದ ಎಲ್ಲಾ ಗುಣಗಳೂ ಮೇಳೈಸಿವೆ ಎಂದು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಐತ್ತಪ್ಪ ನಾಯ್ಕ್ ಹಾಗೂ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು. ಕಾಡು ಬಳಗದ ಸಂಚಾಲಕ ರಾಘವೇಂದ್ರ ಎಚ್.ಎಂ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು.