ಮಂಗಳೂರು : ಮುಂದಿನ 24 ಗಂಟೆಗಳಲ್ಲಿ ಕರಾವಳಿ ಭಾಗಕ್ಕೆ ಸಾಗರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಾಗರ್ ಚಂಡಮಾರುತದ ಪರಿಣಾಮ ಕರಾವಳಿ ಪ್ರದೇಶದ ಕಡಲಿನಲ್ಲಿ ಭಾರಿ ಅಲೆಗಳು ಏಳುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆ, ಮೀನುಗಾರರು ಮೀನುಗಾರಿಕೆ ತೆರಳದಂತೆ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಮಳೆಯ ಅಬ್ಬರಕ್ಕೆ ತತ್ತರಿಸಿರುವ ಕರಾವಳಿಯ ಜನತೆ ಮತ್ತಷ್ಟು ಗಾಳಿ, ಸಿಡಿಲು ಸಹಿತ ಭಾರಿ ಮಳೆಯನ್ನು ಎದುರಿಸಬೇಕಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪ ಸಮೂಹಗಳಿಗೆ ಸಾಗರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಕುರಿತಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅರಬ್ಬಿ ಸಮುದ್ರದ ಅಡೆನ್ ಕೊಲ್ಲಿಯಲ್ಲಿ ಕೇಂದ್ರಿಕೃತವಾಗಿರುವ ಸಾಗರ್ ಚಂಡಮಾರುತದ ಕುರಿತು ದೇಶದ ದಕ್ಷಿಣದ ರಾಜ್ಯಗಳು ಹಾಗೂ ಲಕ್ಷ ದ್ವೀಪದ ನಿವಾಸಿಗಳು ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇದೀಗ ರಾಜ್ಯದ ಕರಾವಳಿಗೆ ಈ ಪ್ರಭಾವಶಾಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.