ಮಂಚಿ: ಉರುಳಿಗೆ ಸಿಲುಕಿದ್ದ ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಬಂಟ್ವಾಳ ಅರಣ್ಯ ಇಲಾಖೆ ಸಿಬ್ಬಂದಿ – ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಉರುಳಿಗೆ ಸಿಲುಕಿದ್ದ ಚಿರತೆಯೊಂದನ್ನು ಬಂಟ್ವಾಳದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುತ್ತ ಮನೆಗಳೇ ಇರುವ ಜಾಗದಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿಕೊಂಡಿರುವ ಬಗ್ಗೆ ಸ್ಥಳೀಯರ ಮಾಹಿತಿ ಆಧಾರದಲ್ಲಿ ಕೂಡಲೇ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಸುಮಾರು 4 ತಾಸುಗಳ ಪರಿಶ್ರಮದ ಬಳಿಕ ಚಿರತೆಯ ಪ್ರಜ್ಞೆ ತಪ್ಪಿಸಿ, ಕೊಂಡೊಯ್ಯುವಲ್ಲಿ ಸಫಲವಾಯಿತು.
ಮಂಗಳೂರಿನ ಡಾ. ಯಶಸ್ವಿ ಹಾಗೂ ವೈದ್ಯರ ತಂಡ ಮತ್ತು ಬರುವ ಇಂಜೆಕ್ಷನ್ ಕೊಟ್ಟ ಬಳಿಕ ಸುಮಾರು 15 ನಿಮಿಷದ ಬಳಿಕ ಅಮಲಿನಲ್ಲಿ ಮಲಗಿದ ಚಿರತೆಯನ್ನು ಬೋನಿನಲ್ಲಿ ಹಾಕಿ ಪಿಕಪ್‍ನಲ್ಲಿ ವಲಯ ಕಚೇರಿಗೆ ತರಲಾಯಿತು. ಸುಮಾರು 60 ಕೆ.ಜಿ. ತೂಕದಷ್ಟಿರುವ ಚಿರತೆಗೆ ಸೂಕ್ತ ಚಿಕಿತ್ಸೆ ನೀಡಿ ಬಳಿಕ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್ ತಿಳಿಸಿದರು.
ಶುಕ್ರವಾರ ತಡರಾತ್ರಿವರೆಗೂ ಆಪರೇಷನ್ ಚಿತಾ ಕಾರ್ಯಾಚರಣೆಯು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ ಇವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯಾರಣ್ಯಾಧಿಕಾರಿ ಪ್ರೀತಮ್ ಎಸ್, ಯಶೋಧರ್, ಅರಣ್ಯರಕ್ಷಕ ಜಿತೇಶ್, ಶೋಭಿತ್, ದಯಾನಂದ್, ಅರಣ್ಯವೀಕ್ಷಕ ಪ್ರವೀಣ್, ಎನ್.ಇ.ಸಿ.ಎಫ್. ತಂಡದಿಂದ ಸ್ನೇಕ್ ಕಿರಣ್, ನಿತ್ಯಪ್ರಕಾಶ್ ಬಂಟ್ವಾಳ್, ಮಂಗಳೂರಿನ ಡಾ. ಯಶಸ್ವಿ ಮತ್ತು ತಂಡದವರು, ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಜೊತೆ ಸ್ಥಳೀಯರಾದ ಮನೋರಾಜ್ ರೈ ಕಟ್ಟೆ, ಪ್ರವೀಣ್ ಶೆಟ್ಟಿ ಉದ್ದೊಟ್ಟು ಮತ್ತಿತರರು ಉಪಸ್ಥಿತರಿದ್ದು, ಸೂಕ್ತ ಕ್ರಮಗಳನ್ನು ಕೈಗೊಂಡರು.