ಪಾಕ್ ಪರ ಜೈಕಾರ ‘ಎಡಿಟೆಡ್ ‘ವಿಡಿಯೋ ವೈರಲ್- ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಜೆ.ಆರ್ ಲೋಬೋ ಆಗ್ರಹ – ಕಹಳೆ ನ್ಯೂಸ್
ಮಂಗಳೂರು : ಕಾಂಗ್ರೆಸ್ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಮಾಡಿದ ವಿಡಿಯೋ ವೈರಲ್ ಆದಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇ 21 ರಂದು ಮಾಜಿ ಶಾಸಕ ಜೆ.ಆರ್ ಲೋಬೋ, ನೇತೃತ್ವದ ಕಾಂಗ್ರೆಸ್ ಪಕ್ಷದ ನಿಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಅವರನ್ನು ಸೋಮವಾರ ಭೇಟಿಯಾಗಿ ದೂರು ಸಲ್ಲಿಸಿದರು.
ಬಳಿಕ ಮಾತನಾಡಿದ ಮಾಜಿ ಶಾಸಕ ಜೆ.ಆರ್ ಲೋಬೋ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ದ.ಕ. ಜಿಲ್ಲಾ ಕಚೇರಿ ಮುಂಬಾಗ ನಾವೆಲ್ಲರೂ ಸಂಭ್ರಮಾಚರಣೆ ಮಾಡಿದ್ದೆವು . ಈ ಸಂದರ್ಭದ ಎಡಿಟೆಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಇದರಲ್ಲಿ ನಮ್ಮೆಲ್ಲರನ್ನೂ ದೇಶದ್ರೋಹಿಗಳಂತೆ ಬಿಂಬಿಸಲಾಗಿದ್ದು, ಇದರಲ್ಲಿ ಪಾಕ್ ಪರ ಜೈಕಾರ ಹಾಕುವ ದ್ವನಿಯನ್ನು ಸೇರಿಸಿ ವಿಡಿಯೋ ತಿರುಚಲಾಗಿದೆ. ಆದರೆ ಅಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಕೆಎಸ್ ಆರ್ ಪಿ ಸಿ ಮತ್ತು ಸಿ ಆರ್ ಪಿ ಎಫ್ ಸ್ಕ್ವಾಡ್ ಹಾಗೂ ಮಾಧ್ಯಮದವರೂ ಹಾಜರಿದ್ದರಿಂದ ಒಂದು ವೇಳೆ ಅಂಥ ಘಟನೆ ನಡೆದಿದ್ದರೆ ಅದು ಎಲ್ಲರ ಗಮನಕ್ಕೆ ಬರುತ್ತಿತ್ತು ಎಂದರು.
ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ, ಕದ್ರಿ ಠಾಣೆಗೂ ದೂರು ನೀಡಲಾಗಿದೆ ಇದೇ ವೇಳೆ ಹೇಳಿದರು. ದೂರಿನ ಬಗ್ಗೆ ಪ್ರತಿಕ್ರಿಯಿಸಿ, ಮಾತನಾಡಿದ ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್, ಪಾಕಿಸ್ತಾನ ಪರ ಜೈಕಾರವಿರುವ ವಿಡಿಯೋ ವೈರಲ್ ಆದಾ ವಿಚಾರ ನಮ್ಮ ಗಮನಕ್ಕೆ ಬಂದಿತ್ತು, ಈ ಬಗ್ಗೆ ನಾವು ಸ್ವಯಂ ಪ್ರೇರಿತ ಕೇಸು ದಾಖಲಿಸಲು ಮುಂದಾಗಿದ್ದೇವು ಆದರೆ ಇದೀಗ ಕೆಲವರು ಕೇಸು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಪ್ಪು ಸಂದೇಶ ರವಾನಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಪ್ರಯತ್ನ ಮಾಡಿದರೆ ಅಂತವರನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದರು
ಈ ಸಂದರ್ಭ ಮೇಯರ್ ಭಾಸ್ಕರ್, ಉಪ ಮೇಯರ್ ಮೊಹಮ್ಮದ್, ಕಲ್ಲಿಗೆ ತಾರನಾಥ ಶೆಟ್ಟಿ, ಕಾರ್ಪೊರೇಟರ್ ಅಪ್ಪಿ, ಸಬಿತಾ ಮಿಸ್ಕಿತ್, ಶಶಿಧರ್ ಹೆಗ್ಡೆ, ನೀರಾಜ್ ಪಾಲ್ ಮತ್ತು ಇತರರು ಉಪಸ್ಥಿತರಿದ್ದರು.