ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಲ್ಲಡ್ಕ ಪೇಟೆಯಲ್ಲಿ ನಿರಂತರವಾಗಿ ಹೆದ್ದಾರಿ ಬ್ಲಾಕ್ ಆಗುತ್ತಿದೆ.
ಬಿಸಿರೋಡು- ಅಡ್ಡಹೊಳೆವರೆಗೆ ನಡೆಯುತ್ತಿರುವ ಚತುಷ್ಪತ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿರುವ ಮರ ಹಾಗೂ ಕಟ್ಟಡಗಳನ್ನು ತೆರವು ಮಾಡುತ್ತಿರುವ ಸಮಯದಲ್ಲಿ ಅನೇಕ ದಿನಗಳಿಂದ ಕಲ್ಲಡ್ಕ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ವಾಹನ ಸವಾರರು ಆರೋಪ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಈ ರಸ್ತೆಯಲ್ಲಿ ಎಡೆಬಿಡದೆ ವಾಹನಗಳು ಸಂಚಾರ ಮಾಡುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕಂಪೆನಿ ವ್ಯವಸ್ಥಿತವಾಗಿ ಕಾಮಗಾರಿಯನ್ನು ಮಾಡಬೇಕಾದ ಅನಿವಾರ್ಯತೆ ಇದೆ, ಹಾಗೂ ರಜಾ ದಿನಗಳಲ್ಲಿ ಮರಕಡಿಯುವ ಕೆಲಸ ಮಾಡಿದರೆ ಉತ್ತಮ ಎಂಬುದು ಸ್ಥಳೀಯರ ಮಾತು.
ಕಾಮಾಗಾರಿ ನಡೆಯುವಾಗ ತೊಂದರೆಗಳು ಉಂಟಾಗುವುದು ಸಹಜ ಆದರೆ ಸಾರ್ವಜನಿಕರಿಗೆ ನಿರಂತರವಾಗಿ ತೊಂದರೆ ನೀಡುವುದು ಕೂಡ ಸರಿಯಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದ್ದು, ಪ್ರತಿ ದಿನ ಈ ಭಾಗದಲ್ಲಿ ಸಂಚರಿಸುವ ಶಾಲಾ ಮಕ್ಕಳಿಗೆ ಹಾಗೂ ಕಚೇರಿಗೆ ತೆರಳುವವರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ.