Breaking news : ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ! ಹಲವು ಶಾಸಕರು ರಾಜೀನಾಮೆಗೆ ಸಿದ್ಧತೆ..?? – ಕಹಳೆ ನ್ಯೂಸ್
ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ. ಇದೇ ಬುಧವಾರ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಲ್ಲಿಯವರೆಗೂ ರಾಜಕೀಯದ ಕಡು ವೈರಿಗಳಾಗಿದ್ದ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾ ದಳ ಇದೀಗ ಅಧಿಕಾರಕ್ಕಾಗಿ ಒಂದಾಗಿದೆ. ಶತಾಯಗತಾಯ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವುದನ್ನು ತಪ್ಪಿಸಬೇಕೆಂದು ಬದ್ಧ ರಾಜಕೀಯ ವೈರಿಗಳೂ ಕೂಡ ಒಂದಾಗಿ ಇದೀಗ ಅಧಿಕಾರ ನಡೆಸಲು ಸಿದ್ಧರಾಗಿದ್ದಾರೆ.
ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿರುವುದರ ಜೊತೆಜೊತೆಗೆ ಭಿನ್ನಮತವೂ ಸರ್ಕಾರವನ್ನು ಮೊದಲ ದಿನದಿಂದಲೇ ಕಾಡುವ ಲಕ್ಷಣಗಳು ಕಾಣಲಾರಂಭಿಸಿವೆ. ಈಗಾಗಲೇ ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್ ಪಕ್ಷ ಯಾವುದೇ ಷರತ್ತಿಲ್ಲದೇ ಜೆಡಿಎಸ್ ನ ಕುಮಾರಸ್ವಾಮಿಯವರಿಗೆ ನೀಡಿದೆ. ಇದು ಕಾಂಗ್ರೆಸ್ಸಿನಲ್ಲಿಯೇ ಹಲವು ನಾಯಕರುಗಳಲ್ಲಿ ಅಸಮಾಧಾನ ತಂದಿದೆ. ಇನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಭಾರಿ ಲಾಬಿ ನಡೆಯುವ ಲಕ್ಷಣಗಳು ನಡೆಯುತ್ತಿವೆ.
ಉಪ ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಈಗಾಗಲೇ ಜೆಡಿಎಸ್ ನಿರ್ಧರಿಸಿದೆ. ಇನ್ನು ಕಾಂಗ್ರೆಸ್ ನಿಂದ ಉಪ ಮುಖ್ಯಮಂತ್ರಿ ಹುದ್ದೆಗೇರಲು ನಾಯಕರುಗಳ ದಂಡೇ ಸಿದ್ಧವಾಗಿ ಕಾಯುತ್ತಿದೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಲಾಬಿಯೂ ನಡೆಯುತ್ತಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿರುವ ಜಿ ಪರಮೇಶ್ವರ್ ಅವರು ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ ಎಂಬ ಸುದ್ದಿ ಹರಡಿತ್ತು. ದಲಿತ ಸಮುದಾಯದ ವ್ಯಕ್ತಿಯೋರ್ವರಿಗೆ ಕರ್ನಾಟಕದ ಪ್ರಮುಖ ಹುದ್ದೆಯನ್ನು ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆ ಕಾರಣದಿಂದ ಕಾಂಗ್ರೆಸ್ ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿತ್ತು.
ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಪರಮೇಶ್ವರ್ ಅವರ ಜೊತೆ ಜೊತೆಗೆ ಹಲವು ಕಾಂಗ್ರೆಸ್ ನಾಯಕರ ಹೆಸರುಗಳು ಕೇಳಿ ಬರುತ್ತಿದ್ದು, ಭಿನ್ನಮತ ಸ್ಫೋಟಗೊಳ್ಳುವ ನಿರೀಕ್ಷೆಯಿದೆ. ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಡಿ ಕೆ ಶಿವಕುಮಾರ್ ಅವರು ಕೂಡ ಇದೀಗ ಉಪ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದಾರೆ. ಇನ್ನು ವೀರಶೈವ-ಲಿಂಗಾಯತರು ತಮ್ಮ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಶಾಮನೂರು ಶಿವಶಂಕರಪ್ಪನವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಉತ್ತರ ಕರ್ನಾಟಕದ ವ್ಯಕ್ತಿಯೊಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿ ಎಂದು ಉತ್ತರ ಕರ್ನಾಟಕದ ಶಾಸಕರುಗಳು ಕೂಡ ಒತ್ತಡ ಹೇರುತ್ತಿದ್ದಾರೆ. ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವರನ್ನು ಉಪಮುಖ್ಯಮಂತ್ರಿ ಮಾಡಿ ಎಂಬ ಕೂಗು ಸಹ ಕೇಳಿಬಂದಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಹಾಗೂ ಸೋನಿಯಾ ಗಾಂಧಿ ಅವರು ಕೂಡ ಈ ಕುರಿತು ಚರ್ಚಿಸಿದ್ದಾರೆ. ಅಧಿಕೃತವಾಗಿ ಯಾರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯುವುದು ಎಂಬುದನ್ನು ಕಾದು ನೋಡಬೇಕಿದೆ.
ಎಂಬಿ ಪಾಟೀಲ್ ಗೆ ಸಚಿವ ಸ್ಥಾನ, ವ್ಯಾಪಕ ಆಕ್ರೋಶ..
ಇನ್ನು ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಮುಂಚೂಣಿಗೆ ಬಂದಿದ್ದ ನಾಯಕ ಎಂ ಬಿ ಪಾಟೀಲ್ ಅವರು ಕೂಡ ಈ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಉತ್ತರ ಕರ್ನಾಟಕದ ಹಲವು ಶಾಸಕರು ಇದನ್ನು ವಿರೋಧಿಸಿದ್ದಾರೆ. ಒಂದು ವೇಳೆ ಎಂ ಬಿ ಪಾಟೀಲ್ ರಿಗೆ ಏನಾದರೂ ಸಚಿವ ಸ್ಥಾನ ನೀಡಿದರೆ ಸಾಮೂಹಿಕ ರಾಜೀನಾಮೆ ನೀಡುವ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಧರ್ಮದ ಪರವಾಗಿ ನಿಂತು ಸಮುದಾಯಕ್ಕೆ ಅಪಮಾನ ಗೈದಿದ್ದ ಎಂ ಬಿ ಪಾಟೀಲರಿಗೆ ಯಾವ ಕಾರಣಕ್ಕೂ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬಾರದು ಎಂದು ಶಾಮನೂರು ಶಿವಶಂಕರಪ್ಪ ಬಣ ಒತ್ತಡ ಹೇರುತ್ತಿದೆ ಎನ್ನಲಾಗಿದೆ. ಒಟ್ಟಾರೆ ಸಮ್ಮಿಶ್ರ ಸರ್ಕಾರ ಆರಂಭವಾಗುವುದಕ್ಕೂ ಮುನ್ನವೇ ಭಿನ್ನಾಭಿಪ್ರಾಯಗಳ ಸರಮಾಲೆ ಕಂಡು ಬರುತ್ತಿದ್ದು ಸರ್ಕಾರದ ಪರಿಸ್ಥಿತಿ ಡೋಲಾಯಮಾನದ ಹಂತ ತಲುಪಿದೆ.