ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ‘ಮಣಿಕರ್ಣಿಕ’ ವೇದಿಕೆಯಲ್ಲಿ ನಡೆದ ಬಾಲ್ಯದ ಮೆಲುಕು ಕಾರ್ಯಕ್ರಮ- ಕಹಳೆ ನ್ಯೂಸ್
ಪುತ್ತೂರು : ವ್ಯಕ್ತಿಯ ಜೀವನದಲ್ಲಿ ಬಾಲ್ಯವೆಂಬುದು ಒಂದು ಮರೆಯಲಾಗದ ಅಧ್ಯಾಯ. ಬಾಲ್ಯದಲ್ಲಿ ಜಂಗಮವಾಣಿ ಇಲ್ಲದ ಜೀವನ ಮೈದಾನದತ್ತ ಸೆಳೆಯುತ್ತಿತ್ತು. ಆದರೆ ಬದಲಾದ ಕಾಲದೊಂದಿಗೆ ಜೀವನ ಕ್ರಮವನ್ನೂ ಬದಲಾಯಿಸಿಕೊಂಡಿದ್ದೇವೆ. ಇಂದಿನ ಮಕ್ಕಳಿಗೆ ಅಂದಿನ ಬಾಲ್ಯದ ಸೊಗಡು ಲಭ್ಯವಿಲ್ಲ. ಬಾಲ್ಯದ ನೆನಪುಗಳನ್ನು ಹಸಿರಾಗಿಸಿಕೊಳ್ಳಲು ವಯಸ್ಸಿನ ಹಂಗಿಲ್ಲ. ಬಾಲ್ಯ ಕಳೆದರೂ ಬಾಲ್ಯದ ಗೆಳೆಯರ ಒಡಗೂಡಿ ಅಂದು ಮಾಡುತ್ತಿದ್ದ ಚಟುವಟಿಕೆಗಳನ್ನು ಇಂದಿಗೂ ಹಮ್ಮಿಕೊಳ್ಳಲು ಸಾಧ್ಯ. ಅದಕ್ಕಾಗಿ ನಾವು ಮನಸ್ಸು ಮಾಡಬೇಕು ಎಂದು ವಿವೇಕಾನಂದ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಭಟ್ ಹೇಳಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ‘ಮರೆತರೂ ಮರೆಯದ ಬಾಲ್ಯ’ ಎಂಬ ವಿಷಯದ ಕುರಿತು ಮಾತನಾಡಿದರು.
ಅಂದಿನ ಕಾಲದಲ್ಲಿ ದಿನಕ್ಕೆ ಇದ್ದಂತಹ ನೂರು ಮೆಸೇಜುಗಳನ್ನು ಆಲೋಚನೆ ಮಾಡಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದೆವು. ಇಂದು ಕರೆ, ಸಂದೇಶಗಳು ಅನಿಯಮಿತವಾಗಿದ್ದರೂ ಕೂಡ ಮಾತುಕತೆ ಅನಿವಾರ್ಯ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿದೆ. ಜೀವನದ ಪ್ರತಿಯೊಂದು ಕ್ಷಣವನ್ನು ನಾವು ಅನುಭವಿಸಲು ಸಿಗುವ ಅವಕಾಶಗಳನ್ನು ಕಳೆದುಕೊಳ್ಳಬಾರದು. ಬಾಲ್ಯದ ಕೆಲವೊಂದು ವಿಚಾರಗಳು ಇಂದಿಗೂ ಅನ್ವಯ ಎಂದು ಅವರು ಅಭಿಪ್ರಾಯಪಟ್ಟರು..
ಪ್ರಥಮ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿನಿ ಚೈತನ್ಯ ಲಕ್ಷ್ಮಿ ವಾರದ ಉತ್ತಮ ಮಾತುಗಾರರಾಗಿ ಹಾಗೂ ಪ್ರಥಮ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ವಾರದ ಉತ್ತಮ ಮಾತುಗಾರ ತಂಡವಾಗಿ ಬಹುಮಾನ ಪಡೆದುಕೊಂಡರು. ಈ ಸಂದರ್ಭ ವಿದ್ಯಾರ್ಥಿಗಳಾದ ಶ್ರೀರಾಮ ಶಾಸ್ತ್ರಿ, ತನುಶ್ರೀ ಬೆಳ್ಳಾರೆ, ಪ್ರಸೀದಕೃಷ್ಣ ಕಲ್ಲೂರಾಯ, ಪ್ರತೀಕ್ಷಾ ಪೂಜಾರಿ, ನವ್ಯಶ್ರೀ ಭಟ್, ಸುಪ್ರಿಯಾ ಹೊಸಮನೆ, ಸಂದೀಪ್ ಮಂಚಿಕಟ್ಟೆ, ಕೃತಿ, ಕಾರ್ತಿಕ್ ಪೈ, ಶ್ವೇತಾ, ನಿಶಾ ಶೆಟ್ಟಿ, ದೀಪ್ತಿ, ಶಮಿತಾ ಮುತ್ಲಜೆ, ಸಿಂಧೂ, ಅಂಶಿ ಶೆಟ್ಟಿ ಚೈತನ್ಯ ಲಕ್ಷ್ಮಿ ಮೊದಲಾದ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ, ಉಪನ್ಯಾಸಕಿ ಸೀಮಾ ಪೋನಡ್ಕ ಹಾಗೂ ಕಾರ್ಯಕ್ರಮದ ಕಾರ್ಯದರ್ಶಿ ಕೃತಿಕ ಸದಾಶಿವ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಂಸಿಜೆ ವಿಬಾಗದ ಉಪನ್ಯಾಸಕಿಯರಾದ ಭವಿಷ್ಯ ಶೆಟ್ಟಿ, ಶ್ರೀಪ್ರಿಯ ಭಾಗವಹಿಸಿದ್ದರು. ತೃತೀಯ ಬಿಎ ವಿದ್ಯಾರ್ಥಿನಿ ಅಂಶಿ ಶೆಟ್ಟಿ ಸ್ವಾಗತಿಸಿ, ಪ್ರಸೀಧ ಕೃಷ್ಣ ಕಲ್ಲೂರಾಯ ವಂದಿಸಿದರು. ನೀತಾ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.