ಕೊಂಬೆಟ್ಟು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ | ಹಿಂದೂ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದ ಪೋಲೀಸರು, ಪುತ್ತೂರು ಪೋಲೀಸ್ ಠಾಣೆಗೆ ಹಿಂದೂ ಜಾಗರಣಾ ವೇದಿಕೆ ಮುತ್ತಿಗೆ ; ಡಿವೈಎಸ್ಪಿ ಮತ್ತು ಮುಖಂಡರ ನಡುವೆ ಮಾತುಕತೆ – ಪ್ರತಿಭಟನೆ ಕೈ ಬಿಟ್ಟ ಹಿಂ.ಜಾ.ವೇ – ಕಹಳೆ ನ್ಯೂಸ್
ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಿದ್ಯಾರ್ಥಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು, ಈ ಸಂದರ್ಭದಲ್ಲಿ ಆಗಮಿಸಿದ ಡಿವೈಎಸ್ ಪಿ ರವರು ಹಿಂದೂ ಜಾಗರಣ ವೇದಿಕೆ ಮುಖಂಡರು ಮತ್ತು ಕಾಲೇಜು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಗನ್ನಿವಾಸ್ ರಾವ್ ಮಾತುಕತೆ ನಡೆಸಿದರು.
ಮಾತುಕತೆ ಮುಗಿದ ಬಳಿಕ ಮಾತನಾಡಿದ ಕಾಲೇಜು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಗನ್ನಿವಾಸ್ ರಾವ್, ‘ಯಾವುದೇ ಗೊಂದಲವಿಲ್ಲ, ಕಾಲೇಜಿನಲ್ಲಿ ನಡೆದ ಅಹಿತಕರ ಘಟನೆ ಕುರಿತಾಗಿ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಕೆಲ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್ ಗಾಗಿ ಕರೆತರಲಾಗಿದೆ’. ‘ಅಹಿತಕರ ಘಟನೆಗೆ ಸರಿಯಾದ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್ ಪಿ ಭರವಸೆ ನೀಡಿದ್ದಾರೆ ಎಂದರು.
ಹಿಂಜಾವೇ ಮುಖಂಡರು ಹಾಗೂ ಡಿವೈಎಸ್ ಪಿ ಮಧ್ಯೆ ನಡೆದ ಮಾತುಕತೆ ಫಲಪ್ರದವಾಗಿದ್ದು , ಸಂಘಟನೆಯ ಮುಖಂಡರನ್ನು ಮನವೊಲಿಸುವಲ್ಲಿ ಡಿವೈಎಸ್ ಪಿ ಸಫಲರಾಗಿದ್ದಾರೆ.
ಮಾತುಕತೆ ನಡೆಸಿ ಹೊರ ಬಂದ ಹಿಂಜಾವೇ ಮುಖಂಡ ಅಜಿತ್ ರೈ ಹೊಸಮನೆ ಮಾತನಾಡಿ, ‘ಇನ್ನು ಮುಂದೆ ಕಾಲೇಜು ವಿಚಾರವಾಗಿ ಯಾವುದೇ ಹೊರಗಿನ ಸಂಘಟನೆ ಹಸ್ತಕ್ಷೇಪ ನಡೆಸದಂತೆ ನೋಡಿಕೊಳ್ಳುವುದಾಗಿ ಡಿವೈಎಸ್ ಪಿಯವರು ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಜಗದೀಶ್ ನೆತ್ತರಕೆರೆ, ಕೆ.ಪಿ. ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.