ಪುತ್ತೂರು: ಮಾತು ಎಂದಿಗೂ ಪ್ರಭಾವಶಾಲಿ ಆಗಿರಬೇಕು. ಮಾತು ತನ್ನೆಡೆಗೆ ಇನ್ನೊಬ್ಬರನ್ನು ಸೆಳೆಯುವಂತಿರಬೇಕು. ಹಾಸ್ಯ ಮಿಶ್ರತವಾದ ಮಾತು, ಜೀವನ ಚಿಂತೆಗಳನ್ನು ಮರೆಸುತ್ತದೆ. ಎಂದು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಹೇಳಿದರು. ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಘಟಕ, ಪತ್ರಿಕೋದ್ಯಮ ವಿಭಾಗ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ತೃತೀಯ ಬಿ.ಎ. ಪತ್ರಿಕೋದ್ಯಮ ಮತ್ತು ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಆಯೋಜಿಸುವ, ಮಣಿಕರ್ಣಿಕ ಮಾತುಗಾರರ ವೇದಿಕೆ ಹಾಗೂ ಸಾಹಿತ್ಯ ಮಂಟಪಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ನುಡಿ-ಬರಹ ಸಮ್ಮೇಳನ’ ದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ‘ಕಾರಿಡಾರ್ ಎಂಬ ರಥಬೀದಿ’ ಎಂಬ ವಿಷಯದ ಕುರಿತು ಮಾತನಾಡಿದರು.
ಕಾರಿಡಾರ್ ಜೀವನಕ್ಕೆ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ಆಡುವ ಮಾತುಗಳು ಒಂದು ರೀತಿ ಇದ್ದರೆ ಅರ್ಥೈಸುವ ಕಣ್ಣುಗಳು ಬೇರೆ ರೀತಿಯೇ ಇದೆ. ಕಾರಿಡಾರ್‍ನಲ್ಲಿ ಯಾವ ರೀತಿ ವರ್ತಿಸುತ್ತಿದೇವೆ ಅನ್ನುವುದು ವಿದ್ಯಾರ್ಥಿಗಳ ಗಮನದಲ್ಲಿರಬೇಕು ಎಂದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತ ಮಾತನಾಡಿ, ಪಠ್ಯಪುಸ್ತಕಗಳು ಜೀವನವನ್ನು ರೂಪಿಸಲು ಸಹಾಯಕವಾದರೆ, ಕಾರಿಡಾರ್ ಪಠ್ಯೇತರ ವಿಷಯ. ತರಗತಿಯೊಳಗಿನ ಪಾಠಗಳ ಜೊತೆಗೆ ಕಾರಿಡಾರ್‍ನಲ್ಲಿ ನಡೆಯುವ ಅರ್ಥಪೂರ್ಣ ಸಂಭಾಷಣೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸುತ್ತದೆ. ಮಾತು ಬಲ್ಲವರು ಬರವಣಿಗೆಯಲ್ಲೂ ಚತುರರು. ಹಾಗಾಗಿ ವಿದ್ಯಾರ್ಥಿಗಳು ಬರವಣಿಗೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ನುಡಿದರು.
ವಿದ್ಯಾರ್ಥಿಗಳಾದ ನೀತಾ ರವೀಂದ್ರ, ಸುಲಕ್ಷಣ ಕೆ, ತೃಪ್ತಿ, ದೀಪ್ತಿ ಕಾರಿಡಾರ್ ಎಂಬ ರಥಬೀದಿ ಎಂಬ ವಿಷಯದ ಕವನ-ಲೇಖನಗಳನ್ನು ವಾಚಿಸಿದರು. ಶ್ರೀರಾಮ, ಕೃತಿಕಾ ಸದಾಶಿವ್, ದೀಕ್ಷಿತಾ, ಶುಭ್ರ, ಚೈತನ್ಯಲಕ್ಷ್ಮಿ ಮಾತನಾಡಿದರು. ಉತ್ತಮ ಮಾತುಗಾರರಾಗಿ ದ್ವಿತೀಯ ಪದವಿ ವಿದ್ಯಾರ್ಥಿ ಮಂಜುನಾಥ್ ಹಾಗೂ ಉತ್ತಮ ಲೇಖನ ಗೌರವವನ್ನು ಪ್ರಥಮ ಪದವಿ ವಿದ್ಯಾರ್ಥಿನಿ ಅನನ್ಯ ಕೆ. ಪಡೆದುಕೊಂಡರು. ಸಾಹಿತ್ಯ ಮಂಟಪದ ವತಿಯಿಂದ ಆಯೋಜಿಸಿದ ರಸಪ್ರಶ್ನೆಯಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ. ಆರ್ ನಿಡ್ಪಳ್ಳಿ, ಉಪನ್ಯಾಸಕಿ ಸೀಮಾ ಪೋನಡ್ಕ, ಕನ್ನಡ ವಿಭಾಗದ ಉಪನ್ಯಾಸಕಿ ಮೈತ್ರಿ ಭಟ್, ಹಿಂದಿ ವಿಭಾಗದ ಉಪನ್ಯಾಸಕಿ ಪೂಜಾ ವೈ. ಡಿ. ಉಪಸ್ಥಿತರಿದ್ದರು. ಅಂತಿಮ ಬಿ.ಎ. ವಿದ್ಯಾರ್ಥಿಗಳಾದ ನಮಿತಾ ಬಿ. ಕೆ. ಸ್ವಾಗತಿಸಿ, ಅಕ್ಷಯ ನವೀನ್ ವಂದಿಸಿದರು. ತನುಶ್ರೀ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.