Saturday, November 23, 2024
ಸುದ್ದಿ

Exclusive : ದೇವರನಾಡನ್ನೇ ಕಂಗೆಡಿಸಿದ ನಿಫಾ ವೈರಸ್‌ ಜ್ವರ ; ರಕ್ತದೊತ್ತಡ ಇಳಿಸುವ ಜ್ವರಕ್ಕೆ ಒಟ್ಟು ಒಂಬತ್ತು ಸಾವು – ಲಕ್ಷಣಗಳೇನು? – ಕಹಳೆ ನ್ಯೂಸ್

ಕಲ್ಲಿಕೋಟೆ: ಕೇರಳದ ಕಲ್ಲಿಕೋಟೆಯಲ್ಲಿ ನಿಫಾ ವೈರಸ್‌ ಸೋಂಕು ಹರಡಿರುವುದರಿಂದ ಇಡೀ ರಾಜ್ಯದ ಜನರು ಆತಂಕಗೊಂಡಿದ್ದಾರೆ. ನೂರಾರು ಜನರು ಸಮೀಪದ ಗ್ರಾಮಗಳಿಂದ ಆಸ್ಪತ್ರೆಗೆ ಆಗಮಿಸು ತ್ತಿದ್ದು, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ರೋಗದ ಭೀತಿ ವ್ಯಕ್ತಪಡಿಸುತ್ತಿದ್ದಾರೆ. ಈ ವರೆಗೆ ಒಟ್ಟು 9 ಜನರು ಈ ರೋಗದಿಂದ ಸಾವನ್ನಪ್ಪಿದ್ದು, 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 20 ಜನರನ್ನು ಪರಿವೀಕ್ಷಣೆಯಲ್ಲಿಡಲಾಗಿದೆ.

ಚೆರುವನೂರು ಮತ್ತು ಪೆರಂಬ್ರಾ ಗ್ರಾಮದ 30 ಕುಟುಂಬಗಳು ಮತ್ತು 150 ಜನರನ್ನು ಸ್ಥಳಾಂತರಿಸಲಾಗಿದೆ. ಬಾಧಿತ ಪ್ರದೇಶಗಳ ಜನರು 2 ವಾರಗಳವರೆಗೆ ಎಲ್ಲಿಗೂ ಪ್ರಯಾಣಿಸ ದಂತೆ, ಯಾರನ್ನೂ ಸಂಪರ್ಕಿಸದಂತೆ ಸೂಚಿಸಲಾಗಿದೆ. ರೋಗ ಹರಡುವ ಭೀತಿಯಿಂದಾಗಿ ಮೃತರ ಅಂತ್ಯ ಸಂಸ್ಕಾರಕ್ಕೆ ಕುಟುಂಬದವರಿಗೂ ಅವಕಾಶ ನೀಡಲಾಗುತ್ತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ವೈರಸ್‌ಗಳು ಬಾವಲಿಗಳಿಂದಲೂ ಹರಡುತ್ತಿದ್ದು, ಅಧಿಕಾರಿಗಳು ಬಾವಲಿಗಳನ್ನು ಸೆರೆಹಿಡಿದು ಸಾಯಿಸುತ್ತಿದ್ದಾರೆ. ಗ್ರಾಮಗಳಲ್ಲಿ ಕೆಲವು ದಿನಗಳ ಹಿಂದೆ ಒಂದಷ್ಟು ಬಾವಲಿಗಳು ಹಾಗೂ ಹಕ್ಕಿಗಳು ಸಾವನ್ನಪ್ಪಿದ್ದು ಕಂಡುಬಂದಿತ್ತು. ಆದರೆ ಗ್ರಾಮಸ್ಥರು ನಿರ್ಲಕ್ಷಿಸಿದ್ದರು. ಆಸ್ಪತ್ರೆಯಲ್ಲಿ ಮೊದಲು ದಾಖಲಾದ ನಿಫಾ ಸೋಂಕಿನ ವ್ಯಕ್ತಿಗೆ ಚಿಕಿತ್ಸೆ ನೀಡಿದ ನರ್ಸ್‌ ಕೂಡ ವೈರಸ್‌ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಳಿಕ ವೈದ್ಯಕೀಯ ಸಿಬಂದಿಗೂ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಕಳೆದ ಎರಡು ದಿನಗಳಿಂದಲೂ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಆಸ್ಪತ್ರೆಯಲ್ಲಿದ್ದು, ಮೇಲುಸ್ತುವಾರಿ ವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲು ಕಂಡು ಬಂದಿದ್ದು ಮಲೇಷ್ಯಾದಲ್ಲಿ
ಈ ರೋಗ ಮೊದಲು ಕಂಡುಬಂದಿದ್ದು 1998-99ರಲ್ಲಿ ಮಲೇಷ್ಯಾ, ಸಿಂಗಾಪುರದಲ್ಲಿ. ಮಲೇಷ್ಯಾದ ನಿಫಾ ಎಂಬ ಹಳ್ಳಿಯಲ್ಲಿ ಮೊದಲು ಕಂಡಿದ್ದರಿಂದ ಈ ರೋಗಕ್ಕೆ ಈ ಹೆಸರಿಡಲಾಗಿದೆ. ಇಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 265 ಜನರಿಗೆ ರೋಗ ತಗುಲಿತ್ತು. ಹಂದಿಗಳಿಂದ ಈ ರೋಗ ಹರಡಿದ್ದು, 100ಕ್ಕೂ ಹೆಚ್ಚು ಹಂದಿಗಳಲ್ಲಿ ರೋಗ ಕಾಣಿಸಿಕೊಂಡಿತ್ತು.

ವಿಶಿಷ್ಟ  ಪ್ರಭೇದದ ವೈರಸ್‌
ಪ್ಯಾರಾಮಿಕೊವಿರಿಡೆ ಪ್ರಭೇದದ ವೈರಸ್‌
ಈ ಹಿಂದೆ ಭಾರತದಲ್ಲಿ 2-3 ಬಾರಿ ಕಾಣಿಸಿಕೊಂಡಿದ್ದ‌ ನಿಫಾ ವೈರಸ್‌
2001ರಲ್ಲಿ ಮೊದಲು ಬಾಂಗ್ಲಾದಲ್ಲಿ, ಅನಂತರ ಭಾರತದ ಸಿಲಿಗುರಿಯಲ್ಲಿ ವೈರಸ್‌ ಪತ್ತೆ

ಸ್ಥಳಕ್ಕೆ ಮಣಿಪಾಲ ವೈದ್ಯರು
ಉಡುಪಿ: ನಿಫಾ ಜ್ವರ ಕಂಡು ಬಂದಿರುವ ಕೇರಳದ ಕಲ್ಲಿಕೋಟೆಗೆ ಮಣಿಪಾಲದ ವೈದ್ಯರು ಧಾವಿಸಿದ್ದಾರೆ. ಮಣಿಪಾಲದ ವೈರಲ್‌ ಇನ್‌ಸ್ಟಿಟ್ಯೂಟ್‌ ಮುಖ್ಯಸ್ಥ ಡಾ| ಅರುಣ್‌ ಕುಮಾರ್‌ ಅವರು ತೆರಳಿದ್ದು ಅಲ್ಲಿನ ಜನರಿಗೆ ಮಾರ್ಗ ದರ್ಶನ ನೀಡುತ್ತಿದ್ದಾರೆ. ಮಣಿಪಾಲದ ಆಸ್ಪತ್ರೆಗೆ ಪರೀಕ್ಷೆಗಾಗಿ ಜ್ವರಪೀಡಿತರ ರಕ್ತದ ಮಾದರಿಗಳನ್ನು ಕಳುಹಿಸಲಾಗಿದೆ.

ಗುಣ-ಲಕ್ಷಣಗಳೇನು?
ದೇಹಕ್ಕೆ ಪ್ರವೇಶಿಸಿದ 7-14 ದಿನಗಳಲ್ಲಿ ನಿಶ್ಚಲವಾಗಿರುವ ವೈರಸ್‌, ಅನಂತರ ವೇಗವಾಗಿ ಹರಡುತ್ತದೆ. ಮಿದುಳು ಊತ, ಹಠಾತ್‌ ಜ್ವರ, ಉಸಿರು ಕಡಿಮೆ ಯಾಗುವುದು, ರಕ್ತದೊತ್ತಡ ಕಡಿಮೆಯಾಗುವುದು, ತಲೆನೋವು, ಮಿದುಳಿನ ಉರಿಯೂತ, ಅಮಲು, ಶ್ವಾಸಕೋಶ ಸೋಂಕು, ಮಾನಸಿಕ ಗೊಂದಲ ಮುಂತಾದ ಗುಣಲಕ್ಷಣ ಕಾಣಿಸಿಕೊಳ್ಳುತ್ತದೆ. ರೋಗಿಯನ್ನು ವೆಂಟಿಲೇಟರ್‌ನಲ್ಲಿ ಇಡುವುದು ಅಗತ್ಯವಾಗುತ್ತದೆ. 24ರಿಂದ 48 ತಾಸುಗಳಲ್ಲಿ ರೋಗಿ ಕೋಮಾಗೂ ಹೋಗಬಹುದು.

ಸಾಂಕ್ರಾಮಿಕ ರೋಗ
ಗಾಳಿಯಿಂದ ಅಥವಾ ಜೊಲ್ಲಿನಿಂದ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಗಾಳಿಯಿಂದ ಹರಡುವ ಬಗ್ಗೆ ಸಾಬೀತಾಗಿಲ್ಲದಿದ್ದರೂ ಹಂದಿ, ಬಾವಲಿ ಅಥವಾ ಹಕ್ಕಿಗಳ ಮೂಲಕ ಇದು ಹರಡುವುದು ಖಚಿತಗೊಂಡಿದೆ. ಮುಖ್ಯವಾಗಿ ಬಾವಲಿಗಳು ಕಚ್ಚಿದ ಹಣ್ಣನ್ನು ಸೇವಿಸ ಲೇಬಾರದು ಎಂದು ಆರೋಗ್ಯ ಇಲಾಖೆ ಖಡಾಖಂಡಿತವಾಗಿ ತಿಳಿಸಿದೆ.

ಕೇರಳದಲ್ಲಿನ ಸನ್ನಿವೇಶವನ್ನು ನಾವು ಗಮನಿಸುತ್ತಿ ದ್ದೇವೆ. ಕೇರಳ ಸರಕಾರದೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಕೇಂದ್ರದಿಂದ ಎಲ್ಲ ರೀತಿಯ ನೆರವಿನ ಭರವಸೆ ನೀಡಲಾಗಿದ್ದು ಕೇಂದ್ರದ ವೈದ್ಯಕೀಯ ತಂಡವನ್ನು ಕೂಡ ಕಳುಹಿಸಲಾಗಿದೆ.
– ಜೆ.ಪಿ.ನಡ್ಡಾ, ಕೇಂದ್ರ ಆರೋಗ್ಯ ಸಚಿವ