Recent Posts

Sunday, September 22, 2024
ಪುತ್ತೂರು

ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲ ಪುಣಚ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ಕಬಕದಲ್ಲಿ ವಿಧಾನ ಪರಿಷತ್ ಅಭ್ಯರ್ಥಿ ಪರ ಬಿಜೆಪಿ ರಾಜ್ಯಾಧ್ಯಕ್ಷರಿಂದ ಮತಯಾಚನೆ-ಕಹಳೆ ನ್ಯೂಸ್

ಕಬಕ: ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲ ಪುಣಚ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಇಲ್ಲಿನ ಇಡ್ಕಿದು ಸೊಸೈಟಿ ಸಭಾಭವನದಲ್ಲಿ ಜರುಗಿತು. ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಲಾಯಿತು. ಪುತ್ತೂರು ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಪ್ರಾಸ್ತಾವಿಕ ಮಾತಾನ್ನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯನ್ನು ಉದ್ದೇಶಿಸಿ ಮಾತಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು, “ನಾವಿಂದು ಪ್ರಜಾಪ್ರಭುತ್ವದ ಸಂಭ್ರಮವನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್. ಇಂದು ಅವರ ಪುಣ್ಯತಿಥಿಯ ದಿನ ನಾವೆಲ್ಲ ಸೇರಿದ್ದೇವೆ. ಮಹಾತ್ಮಾ ಗಾಂಧಿ ರಾಮರಾಜ್ಯದ ಕಲ್ಪನೆ ಕನಸನ್ನು ಕಂಡರು. ರಾಮರಾಜ್ಯ ನಿರ್ಮಾಣವಾಗಬೇಕಾದರೆ ಗ್ರಾಮಗಳ ಉದ್ಧಾರವಾಗಬೇಕು. ಅದು ಪಂಚಾಯತ್ ಸದಸ್ಯರ ಶ್ರಮದಿಂದ ಮಾತ್ರ ಸಾಧ್ಯ.

ಜಾಹೀರಾತು

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪಂಚಾಯತ್ ಗಳಿಗೆ ವಿಶೇಷ ಅಧಿಕಾರ ಸಿಕ್ಕಿತು. ನರೇಂದ್ರ ಮೋದಿಯವರು ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಯಲ್ಲಿ ನೇರವಾಗಿ ಪಂಚಾಯತ್ ಗಳಿಗೆ ಅನುದಾನ ನೀಡಿದರು. ಮುಂದಿನ ಡಿ.10ರಂದು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು ಒಂದೇ ಒಂದು ಮಹತ್ವದ ಮತವನ್ನು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೇ ನೀಡಬೇಕು” ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ, ಸುಳ್ಯ ಶಾಸಕ ಎಸ್. ಅಂಗಾರ ಅವರು ಮಾತಾಡುತ್ತ, “ವಿರೋಧಿಗಳ ಎದುರು ನಮ್ಮ ಶಕ್ತಿ ಪ್ರದರ್ಶನ ನಡೆಯಬೇಕು. ನಾವು ಒಮ್ಮತವನ್ನು ಪ್ರದರ್ಶಿಸಿದಾಗ ವಿರೋಧಿಗಳು ಸುಮ್ಮನಾಗುತ್ತಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರ ಸಂಖ್ಯೆ 3700 ಇದೆ. ಹೀಗಾಗಿ ನಮಗೆ ಗೆಲ್ಲುವುದು ಕಷ್ಟವಲ್ಲ ಆದರೆ 3700ಕ್ಕೆ ಬದಲಾಗಿ 4000 ಮತಗಳನ್ನು ಬೇರೆ ಪಕ್ಷಗಳಿಂದ ಸೆಳೆಯುವ ಮೂಲಕ ನೀಡಿದಲ್ಲಿ ವಿರೋಧಿಗಳು ಮುಂದಿನ ದಿನಗಳಲ್ಲಿ ನಮ್ಮ ವಿರುದ್ಧ ಸ್ಪರ್ಧೆ ಮಾಡಲು ಹಿಂಜರಿಯುತ್ತಾರೆ. ನಮಗೆ ಎಷ್ಟೇ ಗೊತ್ತಿದ್ದರೂ ಚುನಾವಣೆಯಲ್ಲಿ ನೂರಾರು ಮತಗಳು ಅಸಿಂಧುವಾಗುತ್ತದೆ. ಅಭ್ಯರ್ಥಿ ಎಷ್ಟೇ ಇರಬಹುದು ಆದರೆ ನಾವು ಒಂದೇ ಮತವನ್ನು ಕೊಡಬೇಕಿದ್ದು ಅದು ಒಂದನೇ ಕ್ರಮಾಂಕದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರೇ ಆಗಿರಬೇಕು” ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತಾಡುತ್ತ, “ವಿಧಾನ ಪರಿಷತ್ ಚುನಾವಣೆಯಲ್ಲಿ ಹಿಂದೆ ಆಸ್ತಿವಂತರು, ದುಡ್ಡಿರುವವರು ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸುತ್ತಿದ್ದರು. ಆದರೆ ಯಾವಾಗ ಬಿಜೆಪಿ ಪಕ್ಷ ವಿಧಾನಸಭೆಗೆ ಪ್ರವೇಶಿಸಿತೋ ಅಂದಿನಿಂದ ಓರ್ವ ಸಾಮಾನ್ಯ ಕಾರ್ಯಕರ್ತ ವಿಧಾನ ಪರಿಷತ್, ವಿಧಾನಸಭೆ ಮತ್ತು ಲೋಕ ಸಭೆಗೆ ಪ್ರವೇಶ ಪಡೆಯುವಂತಾಯಿತು. ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಪಾರ್ಟಿ. ರಾಷ್ಟೀಯ ವಿಚಾರಧಾರೆಯನ್ನು ಸ್ವೀಕರಿಸಿ ಇಂದು ಬೇರೆ ಪಕ್ಷಗಳ ಅಸಂಖ್ಯ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ಚಿಂತನೆಯಿಂದ ಗ್ರಾಮವನ್ನು, ದೇಶವನ್ನು ಮುಕ್ತವನ್ನಾಗಿ ಮಾಡಬೇಕು. ಜಿಲ್ಲೆಯಲ್ಲಿ ಸಂಘಟನೆಗೆ ಹೊಸ ಶಕ್ತಿ ತುಂಬಿರುವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅನೇಕ ಚುನಾವಣೆಗಳನ್ನು ತಮ್ಮ ನೇತೃತ್ವದಲ್ಲಿ ಗೆದ್ದಿದ್ದಾರೆ. ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದ್ದು ಪಂಚಾಯತ್ ಸದಸ್ಯರು ಅಭೂತಪೂರ್ವ ಜಯ ದಾಖಳಿಸಿದ್ದಾರೆ. ಮತದಾನದ ಪ್ರಾತ್ಯಕ್ಷಿಕೆ ಏಕೆ ಏರ್ಪಡಿಸಲಾಗಿದೆ ಎಂದರೆ ಕಳೆದ ಬಾರಿ 300ರಷ್ಟು ಮತಗಳು ಹಾಳಾಗಿದ್ದು ಈ ಬಾರಿ ಹಾಗಾಗಬಾರದು” ಎಂದರು.

ಮತ ಯಾಚನೆ ಮಾಡಿದ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, “ಈ ದೇಶದ ಚಹಾ ಮಾರುವ ಹುಡುಗನೊಬ್ಬ ಇಂದು ದೇಶದ ಚುಕ್ಕಾಣಿಯನ್ನು ಹಿಡಿದಿದ್ದರೆ ಅದಕ್ಕೆ ಕಾರಣ ಅಂಬೇಡ್ಕರ್ ಅವರ ಶ್ರೇಷ್ಠವಾದ ಸಂವಿಧಾನ. ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದವರು. ಧಾರ್ಮಿಕ ದತ್ತಿ ಇಲಾಖೆಗೆ ಕೋಟ ಮಂತ್ರಿಯಾದಾಗ ಹಳ್ಳಿ ಹಳ್ಳಿಯ ಸಣ್ಣಪುಟ್ಟ ದೇವಸ್ಥಾನಗಳಿಗೂ ಅನುದಾನ ನೀಡಿದರು. ಸಾಮೂಹಿಕ ವಿವಾಹ ಏರ್ಪಡಿಸಿ ಬಡಕುಟುಂಬಕ್ಕೆ ನೆರವಾದರು. ಸಮಾಜ ಕಲ್ಯಾಣ ಇಲಾಖೆ ಮಂತ್ರಿಯಾಗಿರುವ ಈ ವೇಳೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಲಾಭ ಸಿಗಬೇಕೆಂದು ಶ್ರಮಿಸುತ್ತಿದ್ದಾರೆ. ಇಂತಹ ಅಭ್ಯರ್ಥಿಗೆ ಬಹುಮತ ಕೊಟ್ಟು ಗೆಲ್ಲಿಸಬೇಕಾದ ಅನಿವಾರ್ಯತೆಯಿದೆ. ದೇಶ ರಾಮರಾಜ್ಯ ಆಗುವ ಕನಸನ್ನು ಮಹಾತ್ಮಾ ಗಾಂಧೀಜಿ ಕಂಡಿದ್ರು, ಗಾಂಧಿ ಹೆಸರಲ್ಲಿ ಬದುಕಿದ ಕಾಂಗ್ರೆಸ್ ಗ್ರಾಮ ಸ್ವರಾಜ್ ಕಲ್ಪನೆಗೆ ಜೀವ ತುಂಬಲಿಲ್ಲ. ಅದು ನನಸಾಗಲು ನರೇದ್ರ ಮೋದಿ ಬರಬೇಕಾಯಿತು. ಕಾಂಗ್ರೆಸ್ ನಾಯಕರೇ ನೀವು ಮುಖ್ಯಮಂತ್ರಿ ಆಯ್ಕೆ ಮಾಡುವುದು ಬಿಡಿ, ಡಿಕೆಶಿ ಕಾಂಗ್ರೆಸ್ ಅಧ್ಯಕ್ಷರಾಗಿ ಒಂದೂವರೆ ವರ್ಷ ಕಳೆಯಿತು. ಒಬ್ಬ ಪದಾಧಿಕಾರಿಯನ್ನು ನೇಮಿಸಲು ಆಗಲಿಲ್ಲ, ಒಬ್ಬ ಬೂತ್ ಅಧ್ಯಕ್ಷನನ್ನು ಬದಲಾಯಿಸಲು ಆಗಿಲ್ಲ. ನಿಮ್ಮ ಪಕ್ಷವನ್ನೇ ಆಳಲು ನಿಮ್ಮಿಂದ ಸಾಧ್ಯವಿಲ್ಲ ಇನ್ನು ರಾಜ್ಯವಾಳುವುದು ಸಾಧ್ಯವೇ? ಪಂಚಾಯತ್ ಸಶಕ್ತೀಕರಣದ ಕನಸು ಕಂಡಿರುವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ನೀವು ಆದ್ಯತೆಯ ಮತ ಕೊಟ್ಟು ಬಹುಮತಕ್ಕೆ ಸಹಕರಿಸಿ” ಎಂದರು.

ಇದೇ ವೇಳೆ ಮಾಣಿಲ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಪಿ, ಗೀತಾ ಪಳನೀರು, ರಾಜೇಶ್ ಬಾಳೆಕಲ್ಲು ಹಾಗೂ ಕಾಂಗ್ರೆಸ್ ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ, ಸುಂದರ ನಾಯ್ಕ್, ವಿನಯ್ ಕುಮಾರ್, ಪದ್ಮನಾಭ ಶೆಟ್ಟಿ, ಮಹೇಶ್ ಗೌಡ ಸೇರಾಜೆ, ಸತೀಶ್ ನಾಯಕ್ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಅವರನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿ ಧ್ವಜವನ್ನು ಕೊಟ್ಟು ಪಕ್ಷಕ್ಕೆ ಬರಮಾಡಿಕೊಂಡರು.

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಉದಯ ಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ, ಮಂಡಲ ಪ್ರಭಾರಿ ವೆಂಕಟ್ ಒಳಲಂಬೆ, ಹರಿಕೃಷ್ಣ ಬಂಟ್ವಾಳ, ಮಾಧ್ಯಮ ಪ್ರಮುಖ್ ರಣ್ ದೀಪ್ ಕಾಂಚನ್, ಸತೀಶ್ ಕುಂಪಲ, ದೇವದಾಸ್ ಶೆಟ್ಟಿ, ಸಂತೋಷ್ ರೈ ಬೋಳಿಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ನಿತಿನ್ ಕುಮಾರ್, ಕಸ್ತೂರಿ ಪಂಜ, ಮಂಜುಳಾ ರಾವ್, ರಾಧಾಕೃಷ್ಣ ರೈ, ಜಯಂತಿ ನಾಯ್ಕ್, ಜಯಶ್ರೀ, ಭರತ್ ಕುಮಾರ್ ಉಪಸ್ಥಿತರಿದ್ದರು.