Recent Posts

Sunday, September 22, 2024
ಸುದ್ದಿ

Army Chopper Crash: ಸಿಡಿಎಸ್​ ಬಿಪಿನ್​ ರಾವತ್ ದಂಪತಿ​ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ಪತನ; ಮೂವರ ಸ್ಥಿತಿ ಗಂಭೀರ, ನಾಲ್ವರ ಮೃತದೇಹ ಪತ್ತೆ – ಕಹಳೆ ನ್ಯೂಸ್

ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರ್​ವೊಂದು ತಮಿಳುನಾಡಿನ ಕುನ್ನೂರಿನಲ್ಲಿ ಪತನಗೊಂಡಿದೆ. ಅದರಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಸೇರಿ ಒಟ್ಟು 9 ಸಿಬ್ಬಂದಿ ಇದ್ದರು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಬಿಪಿನ್​ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ ಕೂಡ ಇದ್ದರು ಎಂದು ಹೇಳಲಾಗುತ್ತಿದೆ. ಅವರಲ್ಲಿ ಮೂವರನ್ನು ರಕ್ಷಿಸಲಾಗಿದೆ.  ಈ ಮೂವರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಈ ಬಗ್ಗೆ ಭಾರತೀಯ ವಾಯುಸೇನೆ ಟ್ವೀಟ್ ಮಾಡಿದೆ. ಸಿಡಿಎಸ್​ ಬಿಪಿನ್​ ರಾವತ್​ ಇದ್ದ IAF Mi-12V5 ಸೇನಾ ವಿಮಾನ ಇಂದು ತಮಿಳುನಾಡಿನ ಕುನೂರ್​ ಬಳಿ ಅಪಘಾತಕ್ಕೀಡಾಗಿದೆ. ಪತನಕ್ಕೆ ಕಾರಣವೇನು ಎಂಬುದನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ. ಇನ್ನು ಹೆಲಿಕಾಪ್ಟರ್​ನಲ್ಲಿ 9 ಜನರಿದ್ದು, ಮೂವರನ್ನು ಈಗಾಗಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯಕ್ಕಂತೂ ಸ್ಥಳದಲ್ಲಿ ಬೆಂಕಿಯ ಹೊಗೆ ಏಳುತ್ತಿದೆ. ವಿಮಾನ ಬಿದ್ಧ ರಭಸ ನೋಡಿದರೆ ಅದರಲ್ಲಿದ್ದವರು ಗಂಭೀರವಾಗಿಯೇ ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಸಿಕ್ಕ ನಾಲ್ಕು ಮೃತದೇಹದಲ್ಲಿ ಇಬ್ಬರು ಶೇ.80ರಷ್ಟು ಸುಟ್ಟುಹೋಗಿದ್ದಾರೆ. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಇನ್ನೂ ಹುಡುಕಾಟ ನಡೆಯುತ್ತಿದೆ. ಸದ್ಯ ಬಿಪಿನ್​ ರಾವತ್ ಮತ್ತು ಅವರ ಪತ್ನಿ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ.

ಜಾಹೀರಾತು