ಬಂಟ್ವಾಳ: ಪೆಟ್ರೋಲ್-ಡೀಸೆಲ್‍ಗೆ ಪರ್ಯಾಯ ಇಂಧನವಾಗಿ ವಾಹನಗಳಿಗೆ ಸಿಎನ್‍ಜಿ (ಕಂಪ್ರಸ್‍ಡ್ ನ್ಯಾಚುರಲ್ ಗ್ಯಾಸ್) ಬಳಕೆ ಮಾಡಲಾಗುತ್ತಿದ್ದು, ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಸಿಎನ್‍ಜಿ ಇಂಧನ ಬಳಕೆಯ ಬಸ್ಸೊಂದು ಶನಿವಾರ ರಸ್ತೆಗಿಳಿದಿದೆ.
ಉಪ್ಪಿನಂಗಡಿ- ಮಂಗಳೂರು ಮಾರ್ಗದಲ್ಲಿ ಈ ಹೊಸ ಬಸ್ ಓಡಾಟ ಆರಂಭಿಸಿದೆ. ಈ ಬಸ್ಸನ್ನು ಟಾಟಾ ಮೋಟಾರ್ಸ್ ಕಂಪೆನಿ ತಯಾರಿಸಿದ್ದು, ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಿಎನ್‍ಜಿ ಆಧಾರಿತ ಮೊಟ್ಟಮೊದಲ ಬಸ್ ಎಂದು ಖಾಸಗಿ ಬಸ್ ಮಾಲಕರ ಸಂಘದವರು ತಿಳಿಸಿದ್ದಾರೆ.
ಕಂಪೆನಿಯವರ ಮಾಹಿತಿ ಪ್ರಕಾರ ಬಸ್ ಡೀಸೆಲ್‍ಗಿಂತ ಕೊಂಚ ಹೆಚ್ಚು ಮೈಲೇಜ್ ಕೊಡುತ್ತದೆ. ಆದರೆ ಓಡಾಟ ಈಗಷ್ಟೇ ಆರಂಭಗೊಂಡಿರುವುದರಿಂದ ಮೈಲೇಜ್‍ನ ನಿಖರತೆ ಸಿಕ್ಕಿಲ್ಲ ಎಂದು ಮಾಲಕರು ತಿಳಿಸಿದ್ದು, ನೋಂದಣಿ ಸೇರಿ ಈ ಬಸ್‍ಗೆ ಸುಮಾರು 30 ಲಕ್ಷ ರೂ. ತಗಲುತ್ತಿದ್ದು, ಡೀಸೆಲ್ ಬಸ್‍ಗಳಿಗಿಂತ 3.5 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ.
ಕಾರುಗಳಿಗೆ ಸಿಎನ್‍ಜಿ ಇಂಧನ ಬಳಕೆ ಮಾಡುವುದಾದರೆ ಇಂಧನ ತೀರಿದ ಬಳಿಕ ಪೆಟ್ರೋಲ್ ಮೂಲಕವೂ ಪ್ರಯಾಣ ಮುಂದುವರಿಸಬಹುದಾಗಿದೆ. ಆದರೆ ಸಿಎನ್‍ಜಿ ಬಸ್ಸಿನಲ್ಲಿ ಡೀಸೆಲ್ ಬಳಕೆಗೆ ಅವಕಾಶವಿಲ್ಲ. ಬಸ್ಸಿನ ಸಿಎನ್‍ಜಿ ಟ್ಯಾಂಕ್ ಸಾಮಥ್ರ್ಯ 80 ಕೆಜಿ. ಸದ್ಯ ಕೊಳ್ನಾಡು, ಕಾವೂರು, ಹೊಸಬೆಟ್ಟುಗಳಲ್ಲಿ ಮಾತ್ರ ಸಿಎನ್‍ಜಿ ಮರು ಪೂರಣ ವ್ಯವಸ್ಥೆ ಇದ್ದು, ಈ ಬಸ್ಸ್ ಉಪ್ಪಿನಂಗಡಿ-ಮಂಗಳೂರು ಆಗಿರುವುದರಿಂದ ಇಂಧನ ಮುಗಿದ ಬಳಿಕ ಮರುಪೂರಣಕ್ಕಾಗಿ ದೂರದ ಈ ಮೂರು ಸ್ಥಳಗಳಲ್ಲಿ ಯಾವುದಾದರೊಂದಕ್ಕೆ ತೆರಬೇಕು. ಆದ್ದರಿಂದ ಪ್ರಸ್ತುತ ಬಸ್ಸಿನ ನಿರ್ವಹಣೆ ಸವಾಲಿನ ವಿಚಾರವಾಗಿದೆ.
ಮೊದಲ ದಿನ ಚಾಲಕರಾಗಿ ಸಂತೋಷ್ ಪೂಜಾರಿ ಹಾಗೂ ನಿರ್ವಾಹಕರಾಗಿ ರಾಜೇಶ್ ರೈ ಅವರು ಈ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸಿದ್ದು, ಸಿಎನ್‍ಜಿ ಬಸ್ಸಿನ ಓಡಾಟ ಉತ್ತಮ ಅನುಭವ ನೀಡಿದೆ ಎಂದು ತಿಳಿಸಿದ್ದಾರೆ.