ಭೂಮಿಯ ಮೇಲೊಂದು ಗೋವಿನ ಸಂರಕ್ಷಣೆಗಾಗಿ ರಾಘವೇಶ್ವರ ಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ಮೇ 27 ರಂದು ಲೋಕಾರ್ಪಣೆಗೊಳ್ಳಲಿದೆ ” ಗೋ ಸ್ವರ್ಗ ” – ಕಹಳೆ ನ್ಯೂಸ್
ಉತ್ತರ ಕನ್ನಡ : ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗವು ಮೇ27 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭಾನ್ಕುಳಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.
ಗೋಸ್ವರ್ಗದ ಕುರಿತು ಮಾಹಿತಿ ನೀಡಿದ ಅವರು, ಗೋವು ಸ್ವತಂತ್ರವಾಗಿ ಬದುಕಬೇಕು. ಅವುಗಳಿಗೆ ಒಳ್ಳೆಯ ಬದುಕನ್ನು ನೀಡಬೇಕು. ದೇಶಿಯ ಗೋತಳಿಗಳು ಉಳಿಯಬೇಕು. ಕಸಾಯಿಖಾನೆಗೆ ತೆರಳುವ ಗೋವುಗಳ ರಕ್ಷಣೆ ಆಗಬೇಕು ಎನ್ನುವ ಉದ್ದೇಶ ನಮ್ಮದಾಗಿದ್ದು, ಇದಕ್ಕೆ ಎಲ್ಲ ಕಡೆಯಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದು ಹೇಳಿದ್ದಾರೆ.
ನಿರ್ಮಾಣವಾಗಿರುವ ಗೋ ಸ್ವರ್ಗದಲ್ಲಿ ಗೋವುಗಳನ್ನು ನೋಡಿಕೊಳ್ಳುವುದಕ್ಕೆ ಗೋಪಾಲಕರು ಇದ್ದಾರೆ. ಅಲ್ಲದೇ ಅವುಗಳ ಆರೋಗ್ಯ ದೃಷ್ಟಿಯಿಂದ ಸುಸಜ್ಜಿತವಾದ ಗೋ ಆಸ್ಪತ್ರೆಯನ್ನು ಇಲ್ಲಿ ತೆರೆಯಲಾಗುತ್ತದೆ. ಗೋಸ್ವರ್ಗವು ಸಂಪೂರ್ಣ ಗೋಸೌಖ್ಯ ಕೇಂದ್ರವಾಗಿದೆ. ಆರಂಭದಲ್ಲಿ ಒಂದು ಸಾವಿರ ಗೋವುಗಳಿಂದ ಆರಂಭಿಸಲಾಗುತ್ತಿದ್ದು, ಅವುಗಳಿಗೆ ಇದೊಂದು ಸ್ವಚ್ಛಂದ ಸಾಮ್ರಾಜ್ಯವಾಗಿದೆ. ಗೋವುಗಳಿಗೆ ಬೇಕಾದ ಪರಿಶುದ್ಧವಾದ ಆಹಾರ ಇಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಭಾರತೀಯ ಗೋತಳಿಗಳನ್ನು ಉಳಿಸುವುದೇ ಗೋಸ್ವರ್ಗದ ಮುಖ್ಯ ಉದ್ದೇಶವಾಗಿದೆ. ಗೋವುಗಳು ಸ್ವತಂತ್ರವಾಗಿ ವಿಹರಿಸಬೇಕು. ಅವುಗಳದ್ದು ನರಕ ಯಾತನೆಯ ಜೀವನ ಆಗಬಾರದು. ಗೋಸ್ವರ್ಗ ಹಾಗೂ ಗೋಶಾಲೆಯ ಅವಶ್ಯಕತೆ ಎಲ್ಲೆಡೆಯೂ ಇದೆ. ಜಿಲ್ಲೆಯ ಮತ್ತಿತರ ಕಡೆಗಳಲ್ಲಿ ಹಾಗೂ ಅವಶ್ಯ ಇರುವಲ್ಲಿ ಗೋಸ್ವರ್ಗ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೇ 27ರಂದು ಮಾತೆ ಗೋವಿನ ಉಳಿವಿಗಾಗಿ ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಗೋ ಪ್ರೇಮಿಗಳೆಲ್ಲರೂ ಪಾಲ್ಗೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಿನಂತಿಸಿದ್ದಾರೆ.
ಭೂಲೋಕದಲ್ಲಿ ಗೋಸ್ವರ್ಗ ಹೇಗಿದೆ ಗೊತ್ತಾ?
https://youtu.be/GUGvPzLWMoI
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶ್ರೀರಾಮದೇವ ಭಾನ್ಕುಳಿ ಮಠದ ಪರಿಸರದಲ್ಲಿ ಸಹಸ್ರ ಗೋವುಗಳ ಸ್ವಚ್ಛಂದ ಸಾವ್ರಾಜ್ಯ, ಭೂಸ್ವರ್ಗದಲ್ಲಿ ಗೋಸ್ವರ್ಗದ ನಿರ್ಮಾಣ ಭರದಿಂದ ನಡೆಯುತ್ತಿದ್ದು, ಮೇ 2ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ 27ರಂದು ಸಾರ್ವಜನಿಕ ಲೋಕಾರ್ಪಣಾ ಕಾರ್ಯಕ್ರಮ ಜರುಗಲಿದ್ದು, ಸುಮಾರು 100 ಎಕರೆ ಸ್ಥಳದಲ್ಲಿ 1.5 ಲಕ್ಷ ಚದರ ಅಡಿ ಸ್ಥಳದಲ್ಲಿ ಗೋಸ್ವರ್ಗ ಸ್ಥಾಪನೆಯಾಗಲಿದೆ. ಗೋವುಗಳು ಸ್ವತಂತ್ರವಾಗಿ ಅವುಗಳ ಇಚ್ಛೆಯಂತೆ ಬದುಕಲು ವ್ಯವಸ್ಥೆ ಇರಲಿದೆ ಎಂದು ವಿವರಿಸಿದರು.
ದೇಶದಲ್ಲೇ ಮೊದಲ ಬಾರಿಗೆ ವಿನೂತನ ಕಲ್ಪನೆಯ ಗೋಧಾಮ ನಿರ್ಮಾಣವಾಗಲಿರುವ ಗೋಸ್ವರ್ಗ ಸಂಪೂರ್ಣ ಗೋಸೌಖ್ಯ ಕೇಂದ್ರವಾಗಲಿದೆ. ಗೋವಿಗೆ ಏನು ಬೇಕು ಅದನ್ನು ಗೋವು ಬೇಕಾದಾಗ ಪಡೆಯುವ ವ್ಯವಸ್ಥೆ ಗೋಸ್ವರ್ಗದಲ್ಲಿರಲಿದೆ. ಗೋಸ್ವರ್ಗದಲ್ಲಿ ಗೋತೀರ್ಥ ಸರೋವರ, ಸರೋವರದ ಮಧ್ಯೆ ಶಿಲಾಮಂಟಪದಲ್ಲಿ ಜಲರೂಪದಲ್ಲಿ ಸಪ್ತಸನ್ನಿಧಿ, ಸರೋವರದ ಸುತ್ತಲೂ ನಾಲ್ಕು ಗೋಪದ ವೇದಿಕೆಗಳು, ಗೋವುಗಳ ವಿಶ್ರಾಂತಿಗಾಗಿ ಗೋವಿರಾಮ, ವಿಹರಿಸಲು ಗೋವಿಹಾರ, ಸದಾಕಾಲ ಮೇವು ಲಭ್ಯವಿರುವ ಸದಾತೃಪ್ತಿ, ಜಲಪಾನಕ್ಕಾಗಿ ಸುಧಾಸಲಿಲ, ತೀರ್ಥಪಥ, ಪ್ರೇಕ್ಷಾಪಥ, ರಥಪಥ, ತೀರ್ಥಸ್ನಾನಕ್ಕಾಗಿ ಗೋಗಂಗಾ ಸ್ನಾನಘಟ್ಟ, ಗೋಪಲಕರ ವಸತಿಗಾಗಿ ಗೋಪಾಲಭವನ, ಪಶ್ಚಿಮ ಅಂಚಿನಲ್ಲಿ ಗೋಧಾರಾ ತೊರೆ, ತೊರೆಯ ತೀರದಲ್ಲಿ ಗೋವರ್ಧನಗಿರಿ, ಗಿರಿಯಲ್ಲಿ ಗೋನಂದನ ಉದ್ಯಾನ, ಗಿರಿಯ ನೆತ್ತಿಯಲ್ಲಿ ವೀಕ್ಷಾಗೋಪುರ, ಹಸಿ ಮೇವಿಗಾಗಿ ಮೇವು ಬೆಳೆತುವ ಸುಗ್ರಾಸ ಯೋಜನೆ ಇರಲಿದೆ ಎಂದು ವಿವರಿಸಿದರು.
https://youtu.be/2p4jyPkyPws
ಇದೇ ಸಂದರ್ಭದಲ್ಲಿ ಗೋಸ್ವರ್ಗ ಮಾಹಿತಿಪತ್ರಕವನ್ನು ಬಿಡುಗಡೆಗೊಳಿಸಿದರು. ಎಪ್ರಿಲ್ 30ರಂದು ಹೊಸನಗರದ ರಾಮಚಂದ್ರಪುರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ವಿಶಿಷ್ಟ ಗಜಪೃಷ್ಠಾಕೃತಿಯ ಚಂದ್ರಮೌಳೀಶ್ವರ ದೇವರ ಹಾಗೂ ಕೆಕ್ಕಾರಿನ ಶಾಖಾಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಜರಾಜೇಶ್ವರಿ ದೇವರ ಅಷ್ಟಬಂಧ ಪ್ರತಿಷ್ಠಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾಮದುಘಾ ಟ್ರಸ್‌ಟ್ನ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ, ಗೋಫಲ ಟ್ರಸ್‌ಟ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಷಾ ಎಸ್ ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾಧ್ಯಮ ಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ, ಗ್ರಾಮರಾಜ್ಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಅಮ್ಮಂಕಲ್ಲು, ಗಣೇಶ್ ಜೆಡ್ಡಿನಮನೆ ಉಪಸ್ಥಿತರಿದ್ದರು.
- ರಾಮಚಂದ್ರಾಪುರ ಮಠದಿಂದ ಭೂಲೋಕದಲ್ಲಿ ಗೋಸ್ವರ್ಗ
- ಭಾನ್ಕುಳಿ ಮಠದ ಪರಿಸರದಲ್ಲಿ ಸಹಸ್ರ ಗೋವುಗಳ ಸ್ವಚ್ಛಂದ ಸಾವ್ರಾಜ್ಯ
- 100 ಎಕರೆ ಸ್ಥಳದಲ್ಲಿ 1.5 ಲಕ್ಷ ಚದರ ಅಡಿ ಸ್ಥಳದಲ್ಲಿ ಸ್ಥಾಪನೆ
- ಮೇ 27ರಂದು ಸಾರ್ವಜನಿಕ ಲೋಕಾರ್ಪಣಾ ಕಾರ್ಯಕ್ರಮ