ಬಂಟ್ವಾಳ: ಸರಕಾರಿ ಪ್ರೌಢಶಾಲೆ ಶಿಕ್ಷಕಿ ಆತ್ಮಹತ್ಯೆ ಯತ್ನ: ಚಿಕಿತ್ಸೆ ಫಲಕಾರಿಯಾಗದೆ ಸಾವು- ಕಹಳೆ ನ್ಯೂಸ್
ಬಂಟ್ವಾಳ: ಸರಕಾರಿ ಪ್ರೌಡಶಾಲೆಯ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಪ್ರಸ್ತುತ ಪುತ್ತೂರು ತಾಲೂಕಿನ ಅರಿಯಡ್ಕ ಸಮೀಪದ ಪಾಪೆಜಾಲು ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿಟ್ಲ ನಿವಾಸಿ ಪ್ರಿಯಾ ಕುಮಾರಿ (48) ಮೃತಪಟ್ಟವರು .
ವಿಟ್ಲ ಸಿಪಿಸಿಅರ್‍ಐ ಬಳಿ ಪ್ರಿಯಾ ಡಿ.13 ರಂದು ಬೆಳಿಗ್ಗೆ ಬೇಗನೇ ಎದ್ದಿದ್ದು, ಪತಿ ಸ್ನಾನದ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಹೊರಗಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಫತ್ರೆಗೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಿ.14ರ ಸಂಜೆ ಮೃತಪಟ್ಟಿದ್ದಾರೆ.
ಕಳೆದ ಗುರುವಾರದವರೆಗೆ ಅವರು ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಪ್ರಭಾರ ಎಚ್ ಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅವರು ಪಾಪೆಜಾಲು ಹೈಸ್ಕೂಲಿಗೆ ವರ್ಗಾವಣೆಗೊಂಡಿದ್ದು. ವರ್ಗಾವಣೆ ನಿಮಿತ್ತ ಶನಿವಾರವಷ್ಟೇ ಪಾಪೆಮಜಲು ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಭಾನುವಾರ ರಜಾದಿನವಾಗಿದ್ದು, ಮನೆಯಲ್ಲೇ ಇದ್ದರು.
ಇವರು ಅತ್ಯಂತ ಸೂಕ್ಷ್ಮ ಮನಸ್ಸಿನವರಾಗಿದ್ದು ಸಣ್ಣ ವಿಚಾರವನ್ನು ತುಂಬಾ ಗಂಭೀರವಾಗಿ ಸ್ವೀಕರಿಸುವ ಮನಸ್ಥಿತಿಯವರು ಆಗಿದ್ದರು. ಇನ್ನು ಮುಂದೆ ಎಸ್ ಎಸ್ ಎಲ್ ಸಿ ತರಗತಿಗಳಿಗೆ ಪಾಠ ಮಾಡುವ ಅನಿವಾರ್ಯತೆ ಅವರನ್ನು ಒತ್ತಡಕ್ಕೆ ಸಿಲುಕಿಸಿರಬಹುದು ಇದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಹನ್ನೊಂದು ವರ್ಷಗಳ ಕಾಲ ಹಾರಾಡಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಪ್ರಿಯಾರ ಪತಿ ನಿವೃತ್ತ ಯೋಧರಾಗಿದ್ದು, ಪ್ರಸ್ತುತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.