ಭಾರತದಲ್ಲಿ ಯುವತಿಯರ ಮದುವೆಗೆ ಕನಿಷ್ಠ ವಯೋಮಿತಿಯನ್ನು 18 ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಯುವತಿಯರ ಮದುವೆ ವಯಸ್ಸನ್ನು ಹೆಚ್ಚಿಸಲು ಪ್ರಸ್ತಾಪಿಸಿದ್ದರು. ಕನಿಷ್ಠ ಮಿತಿಯನ್ನು 18 ರಿಂದ 21ಕ್ಕೆ ಏರಿಕೆ ಮಾಡುವ ಕುರಿತು ಉಲ್ಲೇಖಿಸಿದ್ದರು.
ಕೇಂದ್ರ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆಗಳಲ್ಲಿ ಬದಲಾವಣೆಗಳನ್ನು ತರಲು ಮುಂದಾಗಿದೆ. ಜಯಾ ಜೇಟ್ಲಿ ನೇತೃತ್ವದಲ್ಲಿ ನೀತಿ ಆಯೋಗದ ಕಾರ್ಯಪಡೆಯು ಈ ಪ್ರಸ್ತಾವನೆ ಹಿಂದೆ ಕೆಲಸ ಮಾಡುತ್ತಿದೆ. ಮದುವೆ ವಯಸ್ಸನ್ನು ತೀರ್ಮಾನಿಸುವ ಬಗ್ಗೆ ಶಿಫಾರಸ್ಸು ಸಲ್ಲಿಸಲು ಕೇಂದ್ರ ಸರ್ಕಾರವು ವಿಶೇಷ ಕಾರ್ಯಪಡೆಯನ್ನು ರಚಿಸಿದೆ. ನಿಗದಿತ ವಯಸ್ಸಿಗಿಂತಲೂ ಮೊದಲು ಮದುವೆ ಆಗುವುದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುವುದು. ತಾಯಿ ಮತ್ತು ಮಗುವಿನ ವಯಸ್ಸಿನ ಅಂತರ ಹಾಗೂ ಮರಣ ಪ್ರಮಾಣ ಹೀಗೆ ಎಲ್ಲ ಅಂಶಗಳ ಬಗ್ಗೆ ಕಾರ್ಯಪಡೆಯು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಿದೆ.
ನೀತಿ ಆಯೋಗದ ಕಾರ್ಯಪಡೆಯು ಸಲ್ಲಿಸಿದ ಶಿಫಾರಸ್ಸಿನಲ್ಲಿ ಯುವತಿಯರ ಮದುವೆ ವಯಸ್ಸನ್ನು ಏಕೆ ಹೆಚ್ಚಿಸಬೇಕು ಎಂಬ ಬಗೆಗೆ ಹಲವು ವಿಷಯಗಳನ್ನು ಉಲ್ಲೇಖಿಸಿದೆ. ಈ ಪೈಕಿ ಮೊದಲ ಬಾರಿ ಮಹಿಳೆಯು ತಮ್ಮ ಎಷ್ಟನೇ ವಯಸ್ಸಿನಲ್ಲಿ ಗರ್ಭ ಧರಿಸುವುದು ಸೂಕ್ತ ಎಂಬುದನ್ನು ತಿಳಿಸಿದೆ. ಮದುವೆಯ ನಂತರ ಮಹಿಳೆಯು ಕನಿಷ್ಠ 21 ವರ್ಷ ಅಥವಾ ಅದರ ನಂತರದಲ್ಲಿ ಗರ್ಭ ಧರಿಸುವುದು ಆರೋಗ್ಯಕರ ಬೆಳವಣಿಗೆ ಆಗಲಿದೆ ಎಂದು ಆಯೋಗದ ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ. ಯುವತಿಯರ ಮದುವೆ ವಯಸ್ಸನ್ನು ಹೆಚ್ಚಿಸುವುದು ಆರ್ಥಿಕ ಬೆಳವಣಿಗೆ ನಿಟ್ಟಿನಲ್ಲೂ ಸೂಕ್ತ ನಿರ್ಧಾರವಾಗಲಿದೆ. ಇದರಿಂದ ಮಹಿಳೆಯರು ಸ್ವಾವಲಂಬಿಯಾಗಿ ಆರ್ಥಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಂತೆ ಆಗುತ್ತದೆ. ಆ ಕುಟುಂಬದ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಇದರ ಜೊತೆಗೆ ಸಮಾಜ ಹಾಗೂ ಮಕ್ಕಳ ಮೇಲೆಯೂ ಪ್ರಭಾವ ಬೀರಲಿದೆ ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಹೆಣ್ಣುಮಕ್ಕಳ ಮದುವೆ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿಗೊಳಿಸಿದೆ. ಆದರೆ ದೇಶದಲ್ಲಿ ಶೇ.27ರಷ್ಟು ಯುವತಿಯರು 18 ವರ್ಷಕ್ಕಿಂತ ಪೂರ್ವದಲ್ಲೇ ವೈವಾಹಿಕ ಬದುಕಿಗೆ ಕಾಲಿರಿಸುತ್ತಿದ್ದು, ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮದುವೆ ವಯೋಮಿತಿಯನ್ನು ಕನಿಷ್ಠ 21 ವರ್ಷಕ್ಕೆ ಹೆಚ್ಚಿಸುವ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವ ಅಗತ್ಯವಿದೆ ಎಂದು ಯುನಿಸೆಫ್ ಅಧ್ಯಯನದಿಂದ ತಿಳಿದು ಬಂದಿದೆ.