ಯಕ್ಷಗಾನ ಕಲಾವಿದರ ಕಲ್ಪತರು ಯಕ್ಷಧ್ರುವ ಪಟ್ಲ ಸಂಭ್ರಮ – 2018 ; ಚಲನಚಿತ್ರ ನಟ ದರ್ಶನ್ ಸೇರಿ ಗಣ್ಯರಿಂದ ಪಟ್ಲ ಸಾಧನೆಗೆ ಶ್ಲಾಘನೆ – ಕಹಳೆ ನ್ಯೂಸ್
ಮಂಗಳೂರು : ಯಕ್ಷಗಾನ ಕಲಾವಿದರ ಜೀವನದ ಏಳಿಗೆಯ ದೃಷ್ಟಿಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ. ವೃತ್ತಿ ಕಲಾವಿದರ ಜತೆಗೆ ನಿವೃತ್ತ ಕಲಾವಿದರ ಹಿತದೃಷ್ಟಿಯಿಂದಲೂ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ಪುಣ್ಯ ಕಾರ್ಯಕ್ಕೆ ದುರ್ಗಾಮಾತೆಯ ಶ್ರೀರಕ್ಷೆ ನಿರಂತರವಾಗಿರಲಿ ಎಂದು ಕಟೀಲು ಕ್ಷೇತ್ರದ ಆನುವಂಶೀಯ ಅರ್ಚಕ ವೆಂಕಟರಮಣ ಆಸ್ರಣ್ಣರು ಶುಭಹಾರೈಸಿದರು. ರವಿವಾರ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಯಕ್ಷಧ್ರುವ ಪಟ್ಲ ಸಂಭ್ರಮ- 2018 ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮತ್ತೋರ್ವ ಆನುವಂಶೀಯ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಯಕ್ಷಗಾನದ ಕಲೆಯ ವೃದ್ಧಿಗೆ ಕಟೀಲು ದೇವಿಯು ಮೊದಲ ಟ್ರಸ್ಟ್ ಆಗಿದ್ದು, ಪಟ್ಲ ಫೌಂಡೇಶನ್ 2ನೇ ಟ್ರಸ್ಟ್ ಎನಿಸಿಕೊಂಡಿದೆ. ಭಾಗವತ ಪಟ್ಲ ಸತೀಶ್ ಶೆಟ್ಟಿ ಇದ್ದವರಿಂದ ಪಡೆದು ಇಲ್ಲದರಿಗೆ ಹಂಚುವ ಮೂಲಕ ಮಧುಕರ ವೃತ್ತಿಯನ್ನು ಮಾಡುತ್ತಿದ್ದಾರೆ ಎಂದರು.
ಆರೋಗ್ಯ ಶಿಬಿರ
ಮುಂಬಯಿನ ಹೊಟೇಲ್ ಉದ್ಯಮಿ ಎನ್.ಟಿ. ಪೂಜಾರಿ ಉದ್ಘಾಟಿಸಿದರು. ಸಾಮಾಜಿಕ ಮುಂದಾಳು ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಎ.ಜೆ.ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ಜಯಶಂಕರ ಮಾರ್ಲ ಅವರು ದಂತ ವೈದ್ಯ ಡಾ| ಬಾಲಚಂದ್ರ ಶೆಟ್ಟಿ ಸರಪಾಡಿ ಅವರಿಗೆ ಔಷಧ ಕಿಟ್ ಹಸ್ತಾಂತರಿಸುವ ಮೂಲಕ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.
ಬಿಡುಗಡೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಟ್ರಸ್ಟ್ ನ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ರಾಕೇಶ್ ಪೂಂಜಾ ಸಂಪಾದಕತ್ವದ ‘ಪಟ್ಲಯಾನ’ ಪುಸ್ತಕ ಬಿಡುಗಡೆಗೊಂಡಿತು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಹಾಗೂ ಉದ್ಯಮಿ ಸೌಂದರ್ಯ ರಮೇಶ್ ಡಾ| ನಾರಾಯಣ ಶೆಟ್ಟಿ ಹಾಗೂ ಗಣೇಶ್ ಕೊಲೆಕಾಡಿ ಅವರ ಯಕ್ಷಗಾನ ಪ್ರಸಂಗಗಳ ಸಂಪುಟವನ್ನು ಬಿಡುಗಡೆಗೊಳಿಸಿದರು.
ಕಟೀಲು ಕ್ಷೇತ್ರದ ಆನುವಂಶೀಯ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಆನುವಂಶೀಯ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕಡೆತ್ತೂರುಗುತ್ತು, ಆರ್‌ಎಸ್‌ಎಸ್ ಮುಖಂಡ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಶಾಸಕ ಜೆ.ಆರ್.ಲೋಬೋ, ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸದಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಆದಾಯ ತೆರಿಗೆ ಇಲಾಖೆಯ ಉಪಾಯುಕ್ತ ಎಂ. ನಾಗಭೂಷಣ, ಟ್ರಸ್ಟ್ ಗೌರವಾಧ್ಯಕ್ಷ ಮಹಾಬಲ ಶೆಟ್ಟಿ ಪಟ್ಲ, ನಿಟ್ಟೆ ವಿವಿ ಕುಲಪತಿ ಡಾ| ಸತೀಶ್ ಭಂಡಾರಿ, ಡಾ| ಪ್ರಭಾಕರ ಜೋಶಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಸ್ವಾಗತಿಸಿದರು. ರವಿ ಶೆಟ್ಟಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಹಾಗೂ ಪ್ರ. ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರ್ವಹಿಸಿದರು.
ನಾಡಿಗೆ ಹೆಮ್ಮೆಯ ವಿಚಾರ
ರಾಜ್ಯ ಯಕ್ಷಗಾನ ಅಕಾಡೆಮಿಯು ಒಂದು ವರ್ಷದಲ್ಲಿ ವೆಚ್ಚ ಮಾಡುವ ಮೊತ್ತವನ್ನು ಪಟ್ಲ ಫೌಂಡೇಶನ್ ಒಂದು ದಿನದಲ್ಲಿ ಕಲಾವಿದರ ಶ್ರೇಯೋಭಿವೃದ್ಧಿ ವ್ಯಯಿಸುತ್ತಿರುವುದು ಇಡೀ ನಾಡೇ ಹೆಮ್ಮೆ ಪಡಬೇಕಾದ ವಿಚಾರ. ಸರಕಾರ ಇದೇ ರೀತಿ ಚಿಂತಿಸಿ ಕಲಾವಿದರಿಗೆ ನೆರವಾಗುವ ಕಾರ್ಯವನ್ನು ಮಾಡಬೇಕಿದೆ ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು ಟ್ರಸ್ಟ್ ನ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಸಾಧಕರಿಗೆ, ಅಶಕ್ತ ಕಲಾವಿದರಿಗೆ ಸಮ್ಮಾನ, ಸಹಾಯಧನ
ಗಂಡುಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವಂತಾಗಲು ಯಕ್ಷಗಾನ ಶಾಲೆಯನ್ನು ತೆರೆದು ಅಲ್ಲಿ ಶಾಸ್ತ್ರಬದ್ಧವಾಗಿ ಯಕ್ಷಗಾನ ತರಗತಿಯನ್ನು ನಡೆಸುವ ಯೋಜನೆಗೆ ಸರ್ವರೂ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ವತಿಯಿಂದ ಶನಿವಾರ ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ‘ಯಕ್ಷಧ್ರುವ ಪಟ್ಲ ಸಂಭ್ರಮ – 2018’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು. ಪಟ್ಲ ಸತೀಶ್ ಶೆಟ್ಟರ ತಂದೆ ಮಹಾಬಲ ಶೆಟ್ಟಿ ಅವರು ಸ್ವತಃ ಕಲಾವಿದರಾಗಿದ್ದ ಕಾರಣ ಕಲಾವಿದರ ಕಷ್ಟದ ಬದುಕಿನ ಬಗ್ಗೆ ಅವರಿಗೆ ಅರಿವಿತ್ತು. ಹೀಗಾಗಿ, ಕಷ್ಟಗಳಿಗೆ ಕಿವಿಯಾಗಿ ಸ್ಪಂದಿಸುವ ಹೃದಯವಂತಿಕೆ ಮಗನಿಗೂ ಬಂದಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದವರು ಆಶಿಸಿದರು.
ಕಲೆ ಶ್ರೀಮಂತ: ದರ್ಶನ್
ನಟ ದರ್ಶನ್ ಮಾತನಾಡಿ, ಕಲಾವಿದರು ಬಡವರಾದರೂ ಅವರಲ್ಲಿರುವ ಕಲೆಗೆ ಬಡತನವಿಲ್ಲ. ಬಡ ಕಲಾವಿದರನ್ನು ಗುರುತಿಸಿ ಗೌರವಿಸುವುದು, ಸಹಾಯ ಮಾಡುವುದು ಕಲಾಮಾತೆಗೆ ನೀಡುವ ಗೌರವಕ್ಕೆ ಸಮಾನ ಎಂದರು.
ಪಟ್ಲ ಪ್ರಶಸ್ತಿ ಪ್ರದಾನ
ಛಂದೋಬ್ರಹ್ಮ ಡಾ| ಶಿಮಂತೂರು ನಾರಾಯಣ ಶೆಟ್ಟಿ ಅವರನ್ನು 1 ಲಕ್ಷ ರೂ. ನಗದು ಸಹಿತ ‘ಪಟ್ಲ ಪ್ರಶಸ್ತಿ’ಯಿಂದ ಪುರಸ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ಡಾ| ಶೆಟ್ಟರು, ಟ್ರಸ್ಟ್‌ನ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಹೊಗಳಿದರು. ಇಂತಹ ಕೆಲಸಗಳು ಮುಂದುವರಿಯುವ ದೃಷ್ಟಿಯಿಂದ ತನಗೆ ನೀಡಿದ ಮೊತ್ತಕ್ಕೆ ಇನ್ನಷ್ಟು ಸೇರಿಸಿ, ಅದನ್ನು ಮತ್ತೆ ಟ್ರಸ್ಟ್‌ಗೆ ನೀಡುವೆ ಎಂದರು.
ಬಳಿಕ ಯಕ್ಷ ಧ್ರುವ ಕಲಾ ಗೌರವ ಪ್ರಶಸ್ತಿಯನ್ನು ಯಕ್ಷಗಾನದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಕುರಿಯ ಗಣಪತಿ ಶಾಸ್ತ್ರಿ, ಎಂ.ಕೆ. ರಮೇಶ್ ಆಚಾರ್ಯ, ಕುತ್ತೂಟ್ಟು ವಾಸು ಶೆಟ್ಟಿ, ಶೀಲಾ ಕೆ. ಶೆಟ್ಟಿ, ಆರ್ಗೋಡು ಮೋಹನ್‌ದಾಸ್ ಶೆಣೈ, ಆನಂದ ಶೆಟ್ಟಿ ಐರಬೈಲು, ಪಾರೆಕೋಡಿ ಗಣಪತಿ ಭಟ್, ಮಹಾಲಕ್ಷ್ಮೀ ಡಿ. ರಾವ್ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕುರಿಯ ಗಣಪತಿ ಶಾಸ್ತ್ರಿಗಳು ಕೂಡ ಪಟ್ಲ ಸತೀಶ್ ಶೆಟ್ಟರ ಕಾರ್ಯವಿಧಾನಗಳಿಗೆ ಮೆಚ್ಚುಗೆ ಸೂಚಿಸಿ, ತನಗೆ ನೀಡಿದ ಗೌರವ ಧನವನ್ನು ಟ್ರಸ್ಟ್‌ಗೇ ಹಿಂತಿರುಗಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಈ ಕೆಲಸ ಸದಾ ಮುಂದುವರಿಯಲಿ ಎಂದು ಆಶಿಸಿದರು.
ಪ್ರತಿಭಾ ಪುರಸ್ಕಾರ, ಗೌರವ ಧನ
ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಶೇ.90 ಮೇಲ್ಪಟ್ಟು ಅಂಕ ಗಳಿಸಿದ ವೃತ್ತಿಪರ ಕಲಾವಿದರ ಮಕ್ಕಳಿಗೆ ಬಂಗಾರ ಪದಕ, 10 ಕಲಾವಿದರಿಗೆ 50 ಸಾವಿರ ರೂ. ಗೌರವ ಧನ, ಈರ್ವರು ಕಲಾವಿದರಿಗೆ ಮರಣೋತ್ತರ ಪ್ರಶಸ್ತಿ ಜತೆಗೆ ಅವರ ಕುಟುಂಬಿಕ ರಿಗೆ 50 ಸಾವಿರ ರೂ. ಸಹಾಯ ಧನ, 8 ಮಂದಿ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ 25 ಸಾವಿರ ರೂ., ಡಾ| ಶಿಮಂತೂರು ನಾರಾಯಣ ಶಟ್ಟಿ ಹಾಗೂ ಗಣೇಶ್ ಕೊಲೆಕಾಡಿ ವಿರಚಿತ ಯಕ್ಷಗಾನ ಪ್ರಸಂಗಗಳ ಸಂಪುಟ ಇದೇ ವೇಳೆ ಬಿಡುಗಡೆಗೊಂಡಿತು.
ಶ್ರೀಕ್ಷೇತ್ರ ಕಟೀಲಿನ ಆನುವಂಶೀಯ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಆಲ್‌ಕಾರ್ಗೋ ಗ್ರೂಪ್ ಅಧ್ಯಕ್ಷ ಶಶಿಕಿರಣ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಮಾಜಿ ಸೊಲಿಸಿಟರ್ ಕೆ.ಎನ್. ಭಟ್, ಬೆಂಗಳೂರು ಎಂ.ಆರ್.ಜಿ. ಗ್ರೂಪ್‌ನ ಪ್ರಕಾಶ್ ಶೆಟ್ಟಿ ಬಂಜಾರ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಕುವೆಂಪು ವಿ.ವಿ.ಯ ಪ್ರೊ| ಅನುರಾಧಾ ಪಟೇಲ್, ಉದ್ಯಮಿಗಳಾದ ಶಶಿಧರ್ ಶೆಟ್ಟಿ, ನಟ ಋಷಭ್ ಶೆಟ್ಟಿ, ರವಿ ಶೆಟ್ಟಿ, ಕೆ.ಎಂ. ಶೆಟ್ಟಿ, ದಿವಾಕರ ಶೆಟ್ಟಿ ಮಲ್ತಾರ್, ಹರೀಶ್ ಶೆಟ್ಟಿ, ಶಶಿಧರ್ ಶೆಟ್ಟಿ ಮಲ್ತಾರ್, ಗುಣಶೀಲ ಶೆಟ್ಟಿ, ರೋಹಿತ್ ಶೆಟ್ಟಿ ನಗ್ರಿಗುತ್ತು, ಸುಧೀರ್ ಶೆಟ್ಟಿ, ವಕ್ವಾಡಿ ಪ್ರವೀಣ್ ಶೆಟ್ಟಿ, ಶ್ಯಾಮ್ ಹೆಬ್ಟಾರ್, ಶಂಕರ್ ಶೆಟ್ಟಿ, ಕೆ.ಡಿ. ಶೆಟ್ಟಿ, ದಿಯಾ ಸಿಸ್ಟಮ್‌ನ ಎಂಡಿ ಡಾ| ರವಿಚಂದ್ರನ್, ಬಡಗಬೆಳ್ಳೂರು ಕಾವೀಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ರಘು ಎಲ್. ಶೆಟ್ಟಿ,ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು, ಪೂನಾ ಬಂಟ್ಸ್ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಪಟ್ಲ ಫೌಂಡೇಶನ್ ದುಬೈ ಘಟಕ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮುಂಬೈ ಘಟಕ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ, ಗುಜರಾತ್ ಘಟಕ ಅಧ್ಯಕ್ಷ ಅಜಿತ್ ಶೆಟ್ಟಿ, ಮಸ್ಕತ್ ಘಟಕದ ಅಧ್ಯಕ್ಷ ಎಸ್.ಕೆ. ಪೂಜಾರಿ, ದಿಲ್ಲಿ ಘಟಕ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಬೆಂಗಳೂರು ಘಟಕ ಅಧ್ಯಕ್ಷ ದಿನೇಶ್ ವೈದ್ಯ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಳ ಹರೀಶ್ ಶೆಟ್ಟಿ, ಸಹ್ಯಾದ್ರಿ ವಿದ್ಯಾಸಂಸ್ಥೆ ಅಧ್ಯಕ್ಷ ಮಂಜುನಾಥ ಭಂಡಾರಿ, ಎಂ. ರವಿ ಶೆಟ್ಟಿ, ಪೂನ ಮಹಾಗಣಪತಿ ಯಕ್ಷಗಾನ ಸಂಘದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಅದಾನಿ ಸಂಸ್ಥೆಯ ಕಿಶೋರ್ ಆಳ್ವ ಉಪಸ್ಥಿತರಿದ್ದರು.