Recent Posts

Sunday, January 19, 2025
ಸುದ್ದಿ

Breaking News : ಕರಾವಳಿಯಲ್ಲಿ ಸಿಡಿಲಿಗೆ ಇಬ್ಬರು ಬಲಿ – ಬೋರ್ಗರೆದ ಗಾಳಿಮಳೆಯಿಂದ ಹಲವು ಮನೆಗಳಿಗೆ ಹಾನಿ – ಕಹಳೆ ನ್ಯೂಸ್

ಮಂಗಳೂರು, ಮೇ 29 : ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಿಡಿಲಾರ್ಭಟದ ಗಾಳಿಮಳೆಯಾಗುತ್ತಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಬೋರ್ಗರೆದ ಮಳೆ ಗಾಳಿಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಭಾನುವಾರ ರಾತ್ರಿ ಸಿಡಿಲು ಬಡಿದು ಮಗು ಸಹಿತ ಇಬ್ಬರು ಮೃತಪಟ್ಟಿದ್ದಾರೆ.

ಪುತ್ತೂರಿನ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಳೀಕರೆಯ ಪ್ರವೀಣ್ ಡಿಸೋಜ (40) ಹಾಗೂ ಮಂಗಳೂರಿನ ಬೋರುಗುಡ್ಡೆಯ ಹನುಮಂತ ಕೆ. ಎಂಬುವರ ಎರಡೂವರೆ ವರ್ಷದ ಪುತ್ರ ಮುತ್ತು ಮೃತಪಟ್ಟವರು. ಹನುಮಂತ ಅವರು ಮೂಲತಃ ಉತ್ತರ ಕರ್ನಾಟಕದವರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಅವರು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ರಾತ್ರಿ 7.30ರ ವೇಳೆ ಮನೆಯೊಳಗೆ ಆಡುತ್ತಿದ್ದ ಮಗು ಮುತ್ತು ಕಣ್ತಪ್ಪಿಸಿ ಹೊರಗೆ ಓಡಿ ಹೋದ ಸಂದರ್ಭ, ಸಿಡಿಲಿನ ಆಘಾತದಿಂದ ಮಗು ಸ್ಥಳದಲ್ಲೇ ಸಾವಿಗೀಡಾಯಿತು. ಸನಿಹದಲ್ಲೇ ವಿದ್ಯುತ್ ತಂತಿಗಳು ಹಾದುಹೋಗಿದ್ದರಿಂದ ಸಿಡಿಲು ಅಪ್ಪಳಿಸಿದ ರಭಸಕ್ಕೆ ವಿದ್ಯುತ್ ಆಘಾತಕ್ಕೆ ಒಳಗಾಗಿ ಮಗು ಸಾವನ್ನಪ್ಪಿರಬಹುದು ಈ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಇನ್ನು ಮೃತಪಟ್ಟ ನೆಲ್ಯಾಡಿಯ ಪ್ರವೀಣ್ ಮೇಸ್ತ್ರಿ ಕೆಲಸಗಾರರಾಗಿದ್ದು ರಾತ್ರಿ ಊಟ ಮುಗಿಸಿ ಮನೆಯ ಹಾಲ್‌ನಲ್ಲಿ ಕಿಟಕಿ ಪಕ್ಕ ಕುರ್ಚಿಯಲ್ಲಿ ಕುಳಿತಿದ್ದಾಗ ಸಿಡಿಲು ಬಡಿದು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು. ಪ್ರವೀಣ್ ಅವರ ಪತ್ನಿ- ಅಡುಗೆ ಕೋಣೆಯಲ್ಲಿದ್ದ ಲಲಿತಾ ಡಿಸೋಜ, ಪಡುಬೆಟ್ಟು ಹಿ.ಪ್ರಾ. ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಪುತ್ರಿ ಪ್ರಣೀತಾ ಪ್ರಿಯಾ ಡಿಸೋಜ ಅಪಾಯದಿಂದ ಪಾರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 20ಕ್ಕೂ ಅಧಿಕ ಮನೆಗಳು ಗಾಳಿಯಿಂದ ಹಾನಿಗೀಡಾಗಿದ್ದು, ಮರ ಬಿದ್ದು ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಉಡುಪಿ ನಗರಾದ್ಯಂತ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.