ವಿವೇಕಾನಂದ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಎನ್.ಐ.ಟಿ.ಕೆ ಸುರತ್ಕಲ್ ಬೀಚ್ ನಲ್ಲಿ ‘ಪುನೀತ್ ಸಾಗರ್ ಅಭಿಯಾನ’ ಸ್ವಚ್ಛತಾ ಕಾರ್ಯಕ್ರಮ- ಕಹಳೆ ನ್ಯೂಸ್
ಪುತ್ತೂರು: ‘ಪುನೀತ್ ಸಾಗರ್ ಅಭಿಯಾನ’ಕ್ಕೆ ಸಾಥ್ ನೀಡುವ ಸಲುವಾಗಿ ವಿವೇಕಾನಂದ ಪದವಿ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಎನ್.ಐ.ಟಿ.ಕೆ ಸುರತ್ಕಲ್ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಒಂದು ದಿನದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾಲೇಜಿನ ಸುಮಾರು 100 ಎನ್.ಸಿ.ಸಿ ಕೆಡೆಟ್ ಗಳು ಭಾಗವಹಿಸಿ, ಬೀಚ್ ನಲ್ಲಿದ್ದ ಪ್ಲಾಸ್ಟಿಕ್ ಬಾಟಲ್, ಕವರ್ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.
ಕಸವನ್ನು ಸಂಗ್ರಹಿಸಲು ಸ್ಥಳೀಯರು ವಿದ್ಯಾರ್ಥಿಗಳಿಗೆ ಸಹಕಾರವನ್ನು ನೀಡಿದರು. ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾವೇ ರಚಿಸಿದ ಕಿರು ನಾಟಕವನ್ನು ಮಾಡಿ ಉತ್ತಮ ಸಂದೇಶವನ್ನು ನೀಡಿದರು.
ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಾಟಲಿಗಳಿಂದ ಕಸದ ಬುಟ್ಟಿಯನ್ನು ತಯಾರಿಸಿ ಬೀಚ್ ನ ಹಲವೆಡೆ ಇರಿಸಿದರು. ಈ ಮೂಲಕ ‘ಕಸದಿಂದ ರಸ’ ಎಂಬ ಮಾತನ್ನು ಸಾಧಿಸಿ ತೋರಿಸಿ, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಡಿಕೇರಿ ಬೆಟಾಲಿಯನ್ ನ ನಾಯಕ್. ಬಸುರಾಜ್. ಟಿ ಮತ್ತು ವಿವೇಕಾನಂದ ಕಾಲೇಜಿನ ಎನ್.ಸಿ.ಸಿ ಘಟಕದ ಮುಖ್ಯಸ್ಥ ಲೆ. ಭಾಮಿ ಅತುಲ್ ಶೆಣೈ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು