Sunday, January 19, 2025
ಸುದ್ದಿ

Exclusive : ಮೂಗು ಮುಚ್ಕೊಳಿ, ಇಂಜೆಕ್ಷನ್‌ ಚುಚ್ಚಿಸ್ಕೊಳ್ಳದಿರಿ ; ಮೂಲಭೂತ ಸೌಕರ್ಯದ ಕೊರತೆಯಿಂದ ಬಳಲುತ್ತಿದೆ ಪುತ್ತೂರಿನ ಸರಕಾರಿ ಆಸ್ಪತ್ರೆ – ಕಹಳೆ ನ್ಯೂಸ್

ಪುತ್ತೂರು : ಸರಕಾರಿ ಆಸ್ಪತ್ರೆ ಇದೀಗ ಸಮಸ್ಯೆಗಳ ಆಗರವಾಗಿ ಬೆಳೆದು ನಿಂತಿದೆ. ಸಿಬ್ಬಂದಿಗಳ ಕೊರತೆ ಇಲ್ಲಿನ ಸಾಮಾನ್ಯ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ಬೇಕಾದ ಮೂಲಭೂತ ಅವಶ್ಯಕತೆಗಳ ಕೊರತೆಯೂ ಇಲ್ಲಿ ಎದ್ದು ಕಾಣುತ್ತಿದೆ. ತುರ್ತು ಚಿಕಿತ್ಸೆ ಹಾಗೂ ಡಯಾಲಿಸೀಸ್ ಮೊದಲಾದ ವಿಭಾಗಗಳಿರುವ ಈ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಅತೀ ಅವಶ್ಯಕವಾಗಿ ಬೇಕಾದ ಜನರೇಟರ್ ಇಲ್ಲಿ ಕೆಟ್ಟು ಹೋಗಿ ಆರು ತಿಂಗಳುಗಳೇ ಕಳೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗೆ ಕೈಗೆಲ್ಲಾ ಪೈಪ್ ಚುಚ್ಚಿಕೊಂಡು ಇರುವವರು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಡಯಾಲೀಸೀಸ್ ಗಾಗಿ ಬಂದವರು. ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ ಈ ಆಸ್ಪತ್ರೆಯಲ್ಲಿ ಹೊರ ಹಾಗೂ ಒಳರೋಗಿಗಳಾಗಿ ಇರುವ ಎಲ್ಲರ ಅವಸ್ಥೆಯೂ ಇದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಹೊರತುಪಡಿಸಿ ದಕ್ಷಿಣಕನ್ನಡ ಜಿಲ್ಲೆಯ ಎರಡನೇ ದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಇಲ್ಲಿ ಕರೆಂಟ್ ಹೋದರೆ ಇಲ್ಲಿರುವ ರೋಗಿಗಳಿಗೆ ದೇವರೇ ಗತಿ ಎನ್ನುವ ಪರಿಸ್ಥಿತಿಯಿದೆ. ತುರ್ತು ಚಿಕಿತ್ಸಾ ವಿಭಾಗ, ಪ್ರಸೂತಿ ವಿಭಾಗ ಹಾಗೂ ಡಯಾಲಿಸೀಸ್ ವಿಭಾಗ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸಾ ವ್ಯವಸ್ಥೆಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಕರೆಂಟ್ ಹೋದಾಗ ಪರ್ಯಾಯವಾಗಿ ಬೇಕಾದ ಜನರೇಟರ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಓಬೀರಾಯನ ಕಾಲದ ಜನರೇಟನ್ನು ಇಂದಿನವರೆಗೂ ನಿಭಾಯಿಸಿಕೊಂಡು ಬಂದಿರುವ ಈ ಆಸ್ಪತ್ರೆಗೆ ಇದೀಗ ಜನರೇಟರ್ ಕೈಕೊಡಲಾರಂಭಿಸಿದೆ. ಕಳೆದ 6 ತಿಂಗಳಿನಿಂದ ಈಗಿರುವ ಜನರೇಟರ್ ಕೆಟ್ಟು ನಿಂತಿದ್ದು, ಇದರಿಂದಾಗಿ ರೋಗಿಗಳ ಸ್ಥಿತಿ ಡೋಲಾಯಮಾನವಾಗಿದೆ. ಅದರಲ್ಲೂ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕರೆಂಟ್ ಹೋಗಿ ರೋಗಿಯ ಸ್ಥಿತಿ ಚಿಂತಾಜನಕವಾಗುವ ಪರಿಸ್ಥಿತಿಯಿಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಆಸ್ಪತ್ರೆಯಲ್ಲಿ ಮೂರು ಡಯಾಲಿಸೀಸ್ ಯೂನಿಟ್ ಇದ್ದು, ಪ್ರತಿದಿನವೂ ಇಲ್ಲಿ ಹತ್ತಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಇಲ್ಲಿ ಡಯಾಲಿಸೀಸ್ ನಡೆಯುತ್ತಿದೆ. ಆದರೆ ಕರೆಂಟ್ ಹೋದಲ್ಲಿ ಡಯಾಲಿಸೀನ್ ಚಿಕಿತ್ಸೆಯಲ್ಲಿ ನಿರತರಾದ ರೋಗಿಗಳ ರಕ್ತ ಡಯಾಲಿಸೀಸ್ ಯಂತ್ರದಲ್ಲಿ ಶೇಖರಣೆಯಾಗುವುದರಿಂದ ರೋಗಿಯ ಆರೋಗ್ಯದ ಮೇಲೆ ಇದು ಭಾರೀ ಪರಿಣಾಮವನ್ನೂ ಬೀರುತ್ತಿದೆ. ಡಯಾಲಿಸೀಸ್ ಗಾಗಿ ಕೈಯೆಲ್ಲಾ ಚುಚ್ಚಿರುವ ಸೂಜಿಗಳಿಂದಾಗಿ ನರಗಳು ದಪ್ಪವಾಗುತ್ತಿದ್ದು, ಅಸಹನೀಯ ನೋವು ಸಹಿಸಬೇಕಾದ ಸ್ಥಿತಿ ಇಲ್ಲಿಗೆ ಬರುವ ರೋಗಿಗಳದ್ದಾಗಿದೆ.
ತುರ್ತು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕರೆಂಟ್ ಗೆ ಪರ್ಯಾಯವಾದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಪ್ರತಿಯೊಂದು ಆಸ್ಪತ್ರೆಗಳ ಕರ್ತವ್ಯವಾಗಿದೆ. ಆದರೆ ಪುತ್ತೂರು ಸರಕಾರಿ ಆಸ್ಪತ್ರೆ ಮಾತ್ರ ಇಂಥಹ ಯಾವುದೇ ವ್ಯವಸ್ಥೆಗಳಿಗೆ ಒತ್ತು ನೀಡದ ಕಾರಣ , ರೋಗಿಗಳು ಪ್ರತಿದಿನ ಪರದಾಡಬೇಕಾದಂತಹ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.