ಶ್ರೀಕೃಷ್ಣಮಠದಲ್ಲಿ ಕೈಮಗ್ಗದ ಸೀರೆ ಉಟ್ಟ ನಾಗಕನ್ನಿಕೆ, ಗ್ಯಾಸ್‍ಲೈಟ್ ಬೆಳಕಿನಲ್ಲಿ ನಡೆದ ನಾಗಮಂಡಲೋತ್ಸವ – ಕಹಳೆ ನ್ಯೂಸ್
ಉಡುಪಿ: ಶ್ರೀಕೃಷ್ಣಮಠದಲ್ಲಿ ಪ್ರತಿ ಪರ್ಯಾಯದಲ್ಲಿ ನಡೆಯುವ ನಾಗಮಂಡಲವು ಶುಕ್ರವಾರ ನಡೆದಿದೆ. ನಿನ್ನೆ ನಡೆದ ನಾಗಮಂಡಲವು ಹಲವು ವಿಶಿಷ್ಟತೆಯಿಂದ ಕೂಡಿತ್ತು. ಸುಮಾರು 40-50 ವರ್ಷಗಳ ಹಿಂದಿನ ನಾಗಮಂಡಲೋತ್ಸವದ ಕ್ಷಣಗಳು ಇಲ್ಲಿ ಮತ್ತೆ ನೋಡಲು ಸಿಕ್ಕಿದೆ. ನಾಗಕನ್ನಿಕೆ ಕೈಮಗ್ಗದ ಸೀರೆ ಉಟ್ಟು ನರ್ತನ ಮಾಡಿದರೆ, ಇತ್ತ ಗ್ಯಾಸ್‍ಲೈಟ್ ಬೆಳಕಿನಲ್ಲೆ ಸಂಪೂರ್ಣ ನಾಗಮಂಡಲೋತ್ಸವ ನಡೆದಿದ್ದು ವಿಶೇಷವಾಗಿತ್ತು.
ನಾಗಕನ್ನಿಕೆಯ ಪಾತ್ರ ವಹಿಸಿದ ಡಮರು ಕಲಾವಿದ ಮುದ್ದೂರು ನಟರಾಜ ವೈದ್ಯರು ಕೈಮಗ್ಗದ, ನೈಸರ್ಗಿಕ ಬಣ್ಣ ಹಾಕಿದ ಸೀರೆಯನ್ನು ಧರಿಸಿ ನರ್ತನ ಮಾಡಿದರು. ಸಗ್ರಿ ಗೋಪಾಲಕೃಷ್ಣ ಸಾಮಗ ನಾಗಪಾತ್ರಿಗಳಾಗಿ ಕಾರ್ಯ ನಿರ್ವಹಿಸಿದರು.
ಪರ್ಯಾಯ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.
ನಾಗಕನ್ನಿಕೆ ಪಾತ್ರ ವಹಿಸಿದ ನಟರಾಜ ವೈದ್ಯರು ಮಾತನಾಡುತ್ತಾ.. ಸುಮಾರು 25 ವರ್ಷಗಳ ಹಿಂದೆ 16 ಮೊಳದ ಕಸೆ ಸೀರೆಯನ್ನು ಉಟ್ಟು ನಾಗಕನ್ನಿಕೆಯ ನರ್ತನ ಮಾಡುತ್ತಿದ್ದೆವು. ಇತ್ತೀಚಿನ ವರ್ಷಗಳಲ್ಲಿ ನಿಂತು ಹೋಯಿತು. ಈಗ ಮತ್ತೆ ಅಂಥ ಸೀರೆಯನ್ನುಟ್ಟು ಸೇವೆ ಸಲ್ಲಿಸುತ್ತಿದ್ದೇವೆ ಎಂದರು.
ಶ್ರೀಕೃಷ್ಣಮಠದಲ್ಲಿ ಬಡಗುಮಾಳಿಗೆ ಎದುರು ಇರುವ ನಾಗನ ಸನ್ನಿಧಿಯಲ್ಲಿ ನಡೆದ ನಾಗಮಂಡಲೊತ್ಸವ 40-50 ವರ್ಷಗಳ ಹಿಂದಿನಂತೆ ಗ್ಯಾಸ್‍ಲೈಟ್ ಬೆಳಕಿನಲ್ಲಿ ಸಂಪನ್ನಗೊಂಡಿತು.