Sunday, November 24, 2024
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡಬಿದಿರೆಯಲ್ಲಿ 81ನೇ ಅಖಿಲ ಭಾರತ ಪುರುಷರ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಆರಂಭ – ಕಹಳೆ ನ್ಯೂಸ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ 81ನೇ ಅಖಿಲ ಭಾರತ ಪುರುಷರ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಜ. 4 ರಿಂದ 7 ರವರೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ.

ಇಂದು ಸಂಜೆ 300 ಕ್ರೀಡಾ ತಂಡಗಳು ಹಾಗೂ 150 ಸಾಂಸ್ಕøತಿಕ ಕಲಾ ತಂಡಗಳಿಂದ ಆಕರ್ಷಕ ಮೆರವಣಿಗೆಯೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದ್ದು, ಕ್ರೀಡಾಕೂಟದಲ್ಲಿ ದೇಶದ 300ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಸುಮಾರು 3500 ಅಥ್ಲೀಟ್‍ಗಳು ಹಾಗೂ 1000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ. ಪಥಸಂಚಲನದ ನಂತರ ಕಾರ್ಯಕ್ರಮವನ್ನು ಇನ್ನಷ್ಟು ಮೆರಗುಗೊಳಿಸಲು ಆಕರ್ಷಕ ಸುಡುಮದ್ದು ಪ್ರದರ್ಶನ
ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನಾ ಸಮಾರಂಭ
ಕರ್ನಾಟಕ ರಾಜ್ಯದ ಕ್ರೀಡಾ ಸಚಿವ ನಾರಾಯಣ ಗೌಡ ಸಂಜೆ 5.30ಕ್ಕೆ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಕನ್ನಡ ಹಾಗೂ ಸಂಸ್ಕøತಿ ಮತ್ತು ಇಂಧನ ಸಚಿವ ವಿ ಸುನಿಲ್ ಕುಮಾರ್, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಜಂಟಿ ಕಾರ್ಯದರ್ಶಿ ಡಾ ಬಲ್ಜೀತ್ ಸಿಂಗ್ ಸೋಖನ್, ಮಂಗಳೂರು ವಿವಿ ಉಪಕುಲಪತಿ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ.

5ನೇ ಬಾರಿ ಆಳ್ವಾಸ್ ಆತಿಥ್ಯ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 5ನೇ ಬಾರಿಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ್ನು ಆಯೋಜಿಸುತ್ತಿದೆ. ಈ ಹಿಂದೆ 72ನೇ, 75ನೇ ಹಾಗೂ 80ನೇ ಕ್ರೀಡಾಕೂಟವನ್ನು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಹಾಗೂ 79ನೇ ಕ್ರೀಡಾಕೂಟವನ್ನು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿತ್ತು. ಇದೀಗ 81ನೇ ಕ್ರೀಡಾಕೂಟವೂ ಯಶಸ್ವಿಯಾಗಿ ಮಂಗಳೂರು ವಿವಿ ಆಶ್ರಯದಲ್ಲಿ ನಡೆಯಲಿದೆ.

81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ ವಿಶೇಷತೆಗಳು:

• ಆಗಮಿಸುವ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ
ಕ್ರೀಡಾಧಿಕಾರಿಗಳಿಗೆ ಉಚಿತ ವಸತಿ ವ್ಯವಸ್ಥೆ
• ಈಗಾಗಲೇ 2,300ಕ್ಕೂ ಅಧಿಕ ಅಥ್ಲೀಟ್‍ಗಳು ಮೂಡುಬಿದಿರೆಗೆ
ಆಗಮಿಸಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ
• ಅಂತರ್ ವಿವಿ ಕ್ರೀಡಾಕೂಟದ ಇತಿಹಾಸದಲ್ಲೇ ಅತ್ಯಧಿಕ
ಕ್ರೀಡಾಪಟುಗಳು ಭಾಗಿ
• ಆಗಮಿಸುವ ಎಲ್ಲಾ ಕ್ರೀಡಾಪಟುಗಳಿಗೆ ರೈಲ್ವೇ ನಿಲ್ದಾಣದಿಂದ
ಉಚಿತ ವಾಹನ ವ್ಯವಸ್ಥೆ
• ರಾಷ್ಟ್ರದ ಖ್ಯಾತ ಕ್ರೀಡಾಪಟುಗಳನ್ನು ಹಾಗೂ
ತರಬೇತುದಾರರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.
• ನಾಲ್ಕು ದಿನ ಕ್ರೀಡಾಕೂಟದ 23 ಸ್ಪರ್ಧೆಗಳು ನಡೆಯಲಿವೆ.
• ಎಲ್ಲಾ ಸ್ಪರ್ಧೆಗಳು ಕ್ಲಪ್ತ ಸಮಯಕ್ಕೆ ನಡೆಯುವಂತೆ
ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ.
• ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆ
• ಪ್ರತಿದಿನ ರಾತ್ರಿ 7 ಗಂಟೆಗೆ ಅದ್ಧೂರಿಯಾದ ವಿಭಿನ್ನ
ಸಾಂಸ್ಕøತಿಕ ವೈಭವದೊಂದಿಗೆ ವಿಜಯ ವೇದಿಕೆಯಲ್ಲಿ ಪದಕ
ವಿಜೇತರನ್ನು ಗೌರವಿಸಲಾಗುವುದು.
• ಈ ಕ್ರೀಡಾಕೂಟವನ್ನು ಖೇಲೋ ಇಂಡಿಯಾ ಹಾಗೂ
ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ
ಮಾನದಂಡವಾಗಿ ಪರಿಗಣಿಸಲಾಗುವುದು.
• ವಿಜೇತರಿಗೆ ನಗದು ಪುರಸ್ಕಾರ

ಉಚಿತ ಊಟ ಹಾಗೂ ವಸತಿ ಸೌಲಭ್ಯ
ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಗಮಿಸುವ ಎಲ್ಲಾ ಸ್ಪರ್ಧಿಗಳು, ತರಬೇತುದಾರರು, ಕ್ರೀಡಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಉಚಿತ ಊಟ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕ್ರೀಡಾಪಟುಗಳ ಅನುಕೂಲಕ್ಕಾಗಿ ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಶೈಲಿಯ
ಊಟದ ವ್ಯವಸ್ಥೆ ಮಾಡಲಾಗಿದ್ದು, ಇದರ ಜೊತೆಗೆ ಕ್ರೀಡಾಕೂಟಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಂಸ್ಥೆ ನೀಡುತ್ತಿದೆ.

ವಿಜೇತರಿಗೆ ನಗದು ಪುರಸ್ಕಾರ
ಕ್ರೀಡಾಕೂಟದಲ್ಲಿ ಪದಕ ವಿಜೇತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಗದು ಪುರಸ್ಕಾರ ನೀಡಲಾಗುತ್ತಿದ್ದು, ಚಿನ್ನದ ಪದಕ ಪಡೆದವರಿಗೆ 25,000ರೂ, ಬೆಳ್ಳಿ 15,000ರೂ ಹಾಗೂ ಕಂಚು 10,000ರೂ, ಕೂಟ ದಾಖಲೆ ನಿರ್ಮಿಸಿದವರಿಗೆ 25,000ರೂ, ಸಮಗ್ರ ಪ್ರಶಸ್ತಿ ವಿಜೇತ ತಂಡಕ್ಕೆ 50,000ರೂ, ರನ್ನರ್ ಅಪ್ 30,000ರೂ, ತೃತಿಯ ಸ್ಥಾನ 20,000ರೂ ನಗದು ಪುರಸ್ಕಾರ ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ
ಘೋಷಿಸಿದ್ದಾರೆ.