ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಆದೇಶದಂತೆ ವಾರಾಂತ್ಯ ಕರ್ಫ್ಯೂ ಜಾರಿ ; ಏನೇನು ಹೆಚ್ಚುವರಿ ನಿಯಂತ್ರಣಾ ಕ್ರಮಗಳು..? ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಹೇಳಿದ್ದೇನು..!? – ಕಹಳೆ ನ್ಯೂಸ್
ಮಂಗಳೂರು, ಜ 05 : “ಕೊರೊನಾ ಓಮಿಕ್ರಾನ್ ಹಿನ್ನೆಲೆ ಜಿಲ್ಲೆಯಲ್ಲಿ ಈ ವಾರ ಸರ್ಕಾರದ ಆದೇಶದಂತೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆ” ಎಂದು ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕರ್ಫ್ಯೂ ಶುಕ್ರವಾರ ರಾತ್ರಿ 8ರಿಂದ ಸೋಮವಾರ ಮುಂಜಾನೆ 5ರವರೆಗೆ ಜಾರಿಯಲ್ಲಿರಲಿದೆ. ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ವೇಳೆ ಬಸ್ ಸಂಚಾರಕ್ಕೆ ಅವಕಾಶ ಇರಲಿದೆ” ಎಂದಿದ್ದಾರೆ.
“ಅಗತ್ಯ ದಿನಬಳಕೆ ವಸ್ತುಗಳ ಅಂಗಡಿ ತೆರೆಯಲು ಅವಕಾಶವಿದ್ದು, ಅಗತ್ಯ ವಸ್ತುಗಳನ್ನು ಸಾರ್ವಜನಿಕರು ತಮ್ಮ ಹತ್ತಿರದ ಮಳಿಗೆಯಲ್ಲಿ ಪಡೆಯಬೇಕು. ಕರ್ಫ್ಯೂ ಜಾರಿಯ ಸಂದರ್ಭ ಅನಗತ್ಯ ಸಂಚಾರ ನಡೆಸದೇ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.
ಹೆಚ್ಚುವರಿ ನಿಯಂತ್ರಣಾ ಕ್ರಮಗಳು :
“ವಾರಾಂತ್ಯ ಕರ್ಫ್ಯೂ ಸಂದರ್ಭ ಶಾಲಾ-ಕಾಲೇಜುಗಳಿಗೆ ರಚನೆ ನೀಡಲು ಸೂಚನೆ ನೀಡಲಾಗಿದೆ. ಪರೀಕ್ಷೆ ಇದ್ದಂತಹ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್‌ನೊಂದಿಗೆ ಶಾಲೆಗೆ ಹೋಗಲು ಅವಕಾಶವಿದೆ” ಎಂದು ಹೇಳಿದ್ದಾರೆ.
“ವಾರಾಂತ್ಯ ಪೂರ್ವ ನಿಗದಿತ ವಿವಾಹ, ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶವಿದೆ. ಆದರೆ, ಸರ್ಕಾರದ ಆದೇಶದಂತೆ 200 ಜನರಿಗೆ ಮಾತ್ರ ಅವಕಾಶ. ಅನಿವಾರ್ಯ ಪೂರ್ವನಿಗದಿತ ಕಾರ್ಯಕ್ರಮಗಳು ಸರ್ಕಾರದ ಆದೇಶದಂತೆ ನಡೆಸಲು ಸೂಚಿಸಲಾಗಿದೆ” ಎಂದಿದ್ಧಾರೆ.
“ಜಿಲ್ಲೆಯ ವಾರಾಂತ್ಯ ಕರ್ಫ್ಯೂ ವೇಳೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಹಕರಿಸಬೇಕು. ಲಾಕ್‌ಡೌನ್ ಆಗದಂತೆ ಸಾರ್ವಜನಿಕರು ಸ್ವಂತ ಜವಾಬ್ದಾರಿ ವಹಿಸಬೇಕು. ಎಂದಿನಂತೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ” ಎಂದು ತಿಳಿಸಿದ್ದಾರೆ.