ರಾಜ್ಯದಲ್ಲಿ ಇನ್ನು ಮುಂದೆ ಸಂಪೂರ್ಣ ಲಾಕ್ ಡೌನ್ ಇಲ್ಲ, ಕಠಿಣ ನಿರ್ಬಂಧ ಹಾಗೂ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾತ್ರ ; ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ – ಕಹಳೆ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಇನ್ನು ಮುಂದೆ ಕಠಿಣ ನಿರ್ಬಂಧ ಹಾಗೂ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾತ್ರ . ಯಾವುದೇ ಕಾರಣಕ್ಕೂ ಸಂಪೂರ್ಣ ಲಾಕ್ ಡೌನ್ ಇನ್ನು ಮುಂದೆ ಇರುವುದಿಲ್ಲ ಎಂದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಕುರಿತು ರಾಜ್ಯದ ಜನತೆಯಲ್ಲಿ ಮನೆಮಾಡಿದ್ದ ಸಂಶಯ ನಿವಾರಿಸಿದ್ದಾರೆ. ಸೋಂಕಿನ ಪ್ರಕರಣಗಳ ಎಷ್ಟೇ ಆದರೂ ರಾಜ್ಯದಲ್ಲಿ ಲಾಕ್ ಡೌನ್ ಮಾಡುವುದಿಲ್ಲ. ಲಾಕ್ ಡೌನ್ ಎಂಬುವುದು ಕಳೆದುಹೋಗಿರುವ ನೀತಿಯಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿರುವಾಗ ತೆಗೆದುಕೊಂಡಿದ್ದ ನೀತಿ ಅದಾಗಿದೆ. ಆದರೆ ಈಗ ಸಾಂಕ್ರಮಿಕವನ್ನು ಎದುರಿಸಿ ಎರಡು ವರ್ಷದ ಅನುಭವವಿದೆ. ಜನಸಾಮಾನ್ಯರ ಬದುಕಿಗೆ ತೊಂದರೆ ಕೊಡದೆ ಕಠಿಣ ನಿಯಮ ತರುತ್ತೇವೆ. ಕೋವಿಡ್ ಮೂರನೆ ಅಲೆಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಓಮಿಕ್ರಾನ್ ಸೋಂಕಿನ ತೀವ್ರತೆ ಗಂಭೀರ ಸ್ವರೂಪದಲ್ಲಿಲ್ಲ ಆದರೆ ಎರಡೂ ಲಸಿಕೆ ಪಡೆಯದವರಲ್ಲಿ ಸೋಂಕು ತಗುಲಿದರೆ ಅದರ ತೀವ್ರತೆ ಹೆಚ್ಚಾಗುತ್ತದೆ. ಇದು ಸೋಂಕಿತರ ಸಾವಿಗೂ ಕಾರಣವಾಗಬಹುದು ಹೀಗಾಗಿಜನರು ಸ್ವಆಸಕ್ತಿಯಿಂದ ಮುಂದೆ ಬಂದು ಕೋವಿಡ್ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಉಡುಪಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅತಿಹೆಚ್ಚು ಕೋವಿಡ್ ಪಾಸಿಟಿವ್ ದರ ವರದಿಯಾಗುತ್ತಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.