Friday, September 20, 2024
ಸುದ್ದಿ

ಕೊರಗಜ್ಜ ಸನ್ನಿಧಿಯಲ್ಲಿ ಕೃತಕ ನೆರೆ ; ಧರ್ಮ ಮೀರಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು – ಕಹಳೆ ನ್ಯೂಸ್

ಮಂಗಳೂರು : ಇತ್ತಿಚ್ಚಿನ ದಿನಗಳಲ್ಲಿ ಸ್ವಾರ್ಥ ಸಾಧನೆ ಮಾಡುವ ರಾಜಕಾರಣಿಗಳು ಜಾತಿ, ಮತ, ಹಿನ್ನೆಲೆ, ಧರ್ಮ ಮತ್ತು ನಂಬಿಕೆ ಎಂಬ ಅಸ್ತ್ರಗಳನ್ನು ಬಳಸಿಕೊಂಡು ದೇಶವನ್ನು ಹಿಂದೂ-ಮುಸ್ಲಿಂ ಎಂದು ವಿಭಜಿಸುತ್ತಿದ್ದಾರೆ. ಆದರೆ, ಇದಕ್ಕೆ ಸೆಡ್ಡು ಹೊಡೆದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

ಕೋಮುದಳ್ಳುರಿಯನ್ನು ಸೃಷ್ಟಿಸುವ ರಾಜಕಾರಣಿಗಳು ಎಷ್ಟೇ ಆಟವಾಡಿದರೂ ಸರ್ವಧರ್ಮ ಸಮನ್ವಯತೆಗೆ ಹೆಸರಾದ ಮಂಗಳೂರಿನಲ್ಲಿ ಎಲ್ಲವನ್ನು ಮೀರಿ ಮೆರೆಯುವುದು ಮಾನವೀಯತೆ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೆ ಉದಾಹರಣೆ ನಿನ್ನೆ ಮಂಗಳೂರಿನಲ್ಲಿ ನಡೆದ ಘಟನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ನಗರದ ಪಾಂಡೇಶ್ವರದಲ್ಲಿ ಪ್ರಸಿದ್ಧ ಕೊರಗಜ್ಜ ದೈವಸ್ಥಾನವೊಂದಿದೆ. ಅನೇಕ ಭಕ್ತ ಜನ ಆಗಮಿಸುವ ಈ ದೈವಸ್ಥಾನದಲ್ಲಿ, ನಿನ್ನೆ ಎಡೆಬಿಡದೇ ಸುರಿದ ಮಳೆ ಅವಾಂತರ ಸೃಷ್ಟಿಸಿತ್ತು. ಸುಮಾರು 9 ಗಂಟೆಗೆ ಶುರುವಾದ ವರುಣನ ಅಬ್ಬರ ರಾತ್ರಿಯವರೆಗೂ ನಿಂತಿರಲಿಲ್ಲ. ಪರಿಣಾಮ ಪಾಂಡೇಶ್ವರದಲ್ಲಿರುವ ಪ್ರಸಿದ್ಧ ಕೊರಗಜ್ಜ ದೈವಸ್ಥಾನದ ಅಂಗಣಕ್ಕೆ ನೀರು ನುಗ್ಗಿ, ಕೃತಕ ಪ್ರವಾಹ ಸೃಷ್ಟಿಯಾಗಿತ್ತು.

ಈ ವೇಳೆ ಕೆಲ ಮುಸ್ಲಿಂ ಯುವಕರು ಒಟ್ಟು ಸೇರಿ ನೆರೆಯಿಂದ ಜಲಾವೃತಗೊಂಡಿದ್ದ ದೈವಸ್ಥಾನದ ಅಂಗಣಕ್ಕೆ ತೆರಳಿ ನೀರನ್ನು ತೆಗೆದು, ಶುಚಿಗೊಳಿಸುವಲ್ಲಿ ಕೈ ಜೋಡಿಸಿದ್ದಾರೆ. ಹಾಶಿರ್, ಮೊಯ್ದೀನ್, ರಮೀಝ್, ಕಾವುಞಕ, ಶಾಬಾಝ್, ಹಸ್ಸನ್. ಕೆ ಎನ್ನುವ ಯುವಕರು ಹಿಂದೂ-ಮುಸ್ಲಿಂ ಎಂಬ ಭೇದಭಾವ ಮರೆತು ಸಹೋದರರಂತೆ ದೈವ ಸನ್ನಿಧಿಯಲ್ಲಿ ಕೆಲಸ ಮಾಡಿದ್ದು, ಇವರ ಪರೋಪಕಾರದ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.