Recent Posts

Saturday, September 21, 2024
ಅಂಕಣ

ಮಕರ ಸಂಕ್ರಾಂತಿಯ ವಿಶೇಷ ಮಾಹಿತಿ ನೀಡುವ ಸನಾತನ ಸಂಸ್ಥೆಯ ಲೇಖನ !- ಕಹಳೆ ನ್ಯೂಸ್

ತಿಥಿ : ಈ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿ ಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ.

ಇತಿಹಾಸ : ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸಂಕ್ರಾಂತಿಯ ಬಗ್ಗೆ ಪಂಚಾಂಗದಲ್ಲಿ ಇರುವ ಮಾಹಿತಿ : ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ, ಹೋಗುವ ದಿಕ್ಕು ಮುಂತಾದವುಗಳ ಮಾಹಿತಿ ಇರುತ್ತದೆ. ಅದು ಕಾಲಮಹಿಮೆಗನುಸಾರ ಅವಳಲ್ಲಿ ಆಗುವ ಬದಲಾವಣೆಯನ್ನು ಅನುಸರಿಸಿರುತ್ತದೆ.

ಮಹತ್ವ : ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಾಧನೆಯ ದೃಷ್ಟಿಯಿಂದ ಮಹತ್ವ : ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.

ಹಬ್ಬವನ್ನು ಆಚರಿಸುವ ಪದ್ಧತಿ
ಮಕರಸಂಕ್ರಾಂತಿಯ ಕಾಲದಲ್ಲಿ ತೀರ್ಥಸ್ನಾನವನ್ನು ಮಾಡುವುದರಿಂದ ಮಹಾಪುಣ್ಯವು ದೊರೆಯುವುದು : ‘ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ, ಯಮುನಾ, ಗೋದಾವರಿ, ಕೃμÁ್ಣ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವು ಲಭಿಸುತ್ತದೆ.’

ದಾನ
‘ಪರ್ವಕಾಲದಲ್ಲಿ ದಾನದ ಮಹತ್ವ : ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.

ದಾನ ಕೊಡುವ ವಸ್ತುಗಳು: ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’

ಬಾಗಿನ ನೀಡುವುದರ ಮಹತ್ವ : ‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.

ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು ? : ಇತ್ತೀಚೆಗೆ ಸಾಬೂನು, ಪ್ಲಾಸ್ಟಿಕ್‍ನ ವಸ್ತುಗಳಂತಹ ನಿರುಪಯುಕ್ತ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರುವ ವಸ್ತುಗಳನ್ನು ಕೊಡಬೇಕು.

ಮಡಿಕೆ : ‘ಸಂಕ್ರಾಂತಿಯ ಹಬ್ಬಕ್ಕೆ ಸಣ್ಣ ‘ಮಣ್ಣಿನ ಮಡಕೆಗಳು ಬೇಕಾಗುತ್ತವೆ. ಅವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ದಾರವನ್ನು ಸುತ್ತುತ್ತಾರೆ. ಮಡಕೆಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿನಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿಯನ್ನು ಬಿಡಿಸಿ ಮಣೆ ಹಾಕಿ ಅದರ ಮೇಲೆ ಐದು ಮಡಕೆಗಳನ್ನಿಟ್ಟು ಅವುಗಳ ಪೂಜೆಯನ್ನು ಮಾಡುತ್ತಾರೆ. ಮೂರು ಮಡಕೆಗಳನ್ನು ಸೌಭಾಗ್ಯವತಿಯರಿಗೆ ದಾನವೆಂದು (ಬಾಗಿನ) ನೀಡುತ್ತಾರೆ, ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ.

ಇತರ ಅಂಶಗಳು
ಸೌಭಾಗ್ಯವತಿ ಸ್ತ್ರೀಯು ಮಕರಸಂಕ್ರಾಂತಿಯ ದಿನ ಇನ್ನೋರ್ವ ಸೌಭಾಗ್ಯವತಿ ಸ್ತ್ರೀಗೆ ಬಾಗಿನವನ್ನು ನೀಡಿ ಉಡಿ ತುಂಬುವುದೆಂದರೆ ಇನ್ನೋರ್ವ ಸ್ತ್ರೀಯಲ್ಲಿನ ದೇವಿತತ್ತ್ವದ ಪೂಜೆಯನ್ನು ಮಾಡಿ ಅವಳಿಗೆ ತನು, ಮನ ಮತ್ತು ಧನದಿಂದ ಸಂಪೂರ್ಣ ಶರಣಾಗುವುದು.

ಇಲ್ಲಿ ಬಾಗಿನ ನೀಡುವ ವಸ್ತುಗಳು ಸತ್ತ್ವಪ್ರಧಾನ (ಉದಾ. ಆಧ್ಯಾತ್ಮಿಕ ಗ್ರಂಥಗಳು, ಸಾತ್ತ್ವಿಕ ಊದುಬತ್ತಿ, ಕರ್ಪೂರ ಇತ್ಯಾದಿ) ವಾಗಿರಬೇಕು. ಸದ್ಯ ಅಸಾತ್ತ್ವಿಕ ವಸ್ತುಗಳನ್ನು (ಉದಾ. ಪ್ಲಾಸ್ಟಿಕ್‍ನ ಭರಣಿ, ಸೌಂದರ್ಯವರ್ಧಕ ಇತ್ಯಾದಿ) ಬಾಗಿನವೆಂದು ನೀಡುತ್ತಾರೆ.

ಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡಿದಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ.
ಸಾತ್ತ್ವಿಕ ವಸ್ತುಗಳಿಂದಾಗಿ ಜೀವದಲ್ಲಿನ ಜ್ಞಾನಶಕ್ತಿ (ಪ್ರಜ್ಞಾಶಕ್ತಿ) ಮತ್ತು ಭಕ್ತಿಯು ಜಾಗೃತವಾಗುತ್ತದೆ ಮತ್ತು ಅಸಾತ್ತ್ವಿಕ ವಸ್ತುಗಳಲ್ಲಿ ಮಾಯಾವಿ ಸ್ಪಂದನಗಳ ಪ್ರಮಾಣವು ಹೆಚ್ಚಿರುವುದರಿಂದ ಜೀವದಲ್ಲಿನ ಆಸಕ್ತಿಯು ಹೆಚ್ಚುತ್ತದೆ.

ಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ನೀಡುವಾಗ ಉದ್ದೇಶವು ಶುದ್ಧ ಮತ್ತು ಪ್ರೇಮಭಾವವು ಅಧಿಕವಾಗಿರುವುದರಿಂದ ನಿರಪೇಕ್ಷತೆಯು ಬರುತ್ತದೆ. ಇದರಿಂದ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುವುದಿಲ್ಲ. ತದ್ವಿರುದ್ಧವಾಗಿ ಅಸಾತ್ತ್ವಿಕ ವಸ್ತುಗಳನ್ನು ಬಾಗಿನವೆಂದು ಕೊಡುವಾಗ ಅಪೇಕ್ಷೆ, ಆಸಕ್ತಿಗಳ ಪ್ರಮಾಣವು ಹೆಚ್ಚಿರುವುದರಿಂದ ಕೊಡುಕೊಳ್ಳುವಿಕೆಯ ಲೆಕ್ಕಾಚಾರ ನಿರ್ಮಾಣವಾಗುತ್ತದೆ.

ಎಳ್ಳಿನ ಉಪಯೋಗ
ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ, ಉದಾ. ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ).

ಮಕರ ಸಂಕ್ರಾಂತಿಯ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿದೆ !
ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯವರೆಗಿನ ಕಾಲವನ್ನು ‘ದಕ್ಷಿಣಾಯಣ’ ಎನ್ನುತ್ತಾರೆ. ಸೂರ್ಯನ ದಕ್ಷಿಣಾಯಣ ಆರಂಭವಾಗುವುದಕ್ಕೆ ಬ್ರಹ್ಮಾಂಡದ ಸೂರ್ಯನಾಡಿ ಕಾರ್ಯನಿರತವಾಗುವುದು ಎಂದು ಹೇಳುತ್ತಾರೆ. ಬ್ರಹ್ಮಾಂಡದ ಸೂರ್ಯನಾಡಿಯು ಕಾರ್ಯನಿರತವಾಗುವುದರಿಂದ (ಸೂರ್ಯನ ದಕ್ಷಿಣಾಯಣದಲ್ಲಿ) ಬ್ರಹ್ಮಾಂಡದಲ್ಲಿನ ರಜ-ತಮಾತ್ಮಕ ಲಹರಿಗಳು ಹೆಚ್ಚು ಪ್ರಮಾಣದಲ್ಲಿರುತ್ತದೆ.

ಮಕರ ಸಂಕ್ರಾಂತಿಯ ದಿನ ಸೂರ್ಯನ ಉತ್ತರಾಯಣವು ಆರಂಭವಾಗುತ್ತದೆ. ಸೂರ್ಯನ ಉತ್ತರಾಯಣ ಆರಂಭವಾಗುವುದನ್ನೇ ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದೆಂದು ಹೇಳುತ್ತಾರೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗುವುದರಿಂದ ಸೂರ್ಯನ ಉತ್ತರಾಯಣದಲ್ಲಿ, ಬ್ರಹ್ಮಾಂಡದಲ್ಲಿ ರಜ-ಸತ್ತ್ವಾತ್ಮಕ ಲಹರಿಗಳ ಪ್ರಮಾಣವು ಅಧಿಕ ವಾಗಿರುತ್ತದೆ. ಆದುದರಿಂದ ಈ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿರುತ್ತದೆ. ಬ್ರಹ್ಮಾಂಡದ ಚಂದ್ರನಾಡಿಯು ಕಾರ್ಯನಿರತವಾಗಿರುವುದರಿಂದ ಈ ಕಾಲದಲ್ಲಿ ವಾತಾವರಣವು ಕೂಡ ಎಂದಿಗಿಂತಲೂ ಹೆಚ್ಚು ಶೀತಲವಾಗಿರುತ್ತದೆ. ಈ ಕಾಲದಲ್ಲಿ ಎಳ್ಳನ್ನು ತಿನ್ನುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಎಳ್ಳೆಣ್ಣೆಯಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಕ್ಷಮತೆಯು ಅಧಿಕವಾಗಿರುತ್ತದೆ, ಅಲ್ಲದೆ ಎಳ್ಳನ್ನು ತಿನ್ನುವುದರಿಂದ ಶರೀರದಲ್ಲಿನ ಚಂದ್ರನಾಡಿಯು ಕಾರ್ಯನಿರತವಾಗುತ್ತದೆ.

ಇದರಿಂದಾಗಿ ಜೀವವು ವಾತಾವರಣದೊಂದಿಗೆ ಬೇಗನೆ ಹೊಂದಿಕೊಳ್ಳುತ್ತದೆ; ಏಕೆಂದರೆ ಈ ಸಮಯದಲ್ಲಿ ಬ್ರಹ್ಮಾಂಡದ ಚಂದ್ರನಾಡಿಯೇ ಕಾರ್ಯನಿರತವಾಗಿರುತ್ತದೆ. ಜೀವದ ಶರೀರದಲ್ಲಿನ ವಾತಾವರಣ ಮತ್ತು ಬ್ರಹ್ಮಾಂಡದಲ್ಲಿನ ವಾತಾವರಣ ಒಂದಾಗುವುದರಿಂದ ಸಾಧನೆ ಮಾಡುವಾಗ ಜೀವಕ್ಕೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.

ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಬ್ಬ-ಉತ್ಸವಗಳನ್ನು ಮತ್ತು ವ್ರತಗಳನ್ನು ಆಚರಿಸಲು ಸ್ವಲ್ಪ ಮಟ್ಟಿಗೆ ನಿಬರ್ಂಧ ಉಂಟಾಗಿದೆ. ಇಂತಹ ಸಮಯದಲ್ಲಿ ಹಬ್ಬಗಳನ್ನು ಆಚರಿಸುವಾಗ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1. ಸಂಕ್ರಾಂತಿಯನ್ನು ಆಚರಿಸುವಾಗ ಎಲ್ಲ ಆಚಾರಗಳನ್ನು (ಉದಾ. ಅರಶಿಣಕುಂಕುಮ ಸಮಾರಂಭ, ಎಳ್ಳುಬೆಲ್ಲ ಹಂಚುವುದು ಇತ್ಯಾದಿ) ತಮ್ಮ ಸ್ಥಳೀಯ ಪರಿಸ್ಥಿತಿಯನ್ನು ನೋಡಿ ಕೊರೋನಾದ ವಿಷಯದಲ್ಲಿ ಆಡಳಿತವು ಹಾಕಿಕೊಟ್ಟ ಎಲ್ಲ ನಿಯಮಗಳನ್ನು ಪಾಲಿಸಿ ಆಚರಿಸಬೇಕು.

2. ಎಳ್ಳುಬೆಲ್ಲವನ್ನು ಪರಸ್ಪರ ಹಂಚುವಾಗ ನೇರವಾಗಿ ಹಂಚದೇ ಸಣ್ಣ ಸಣ್ಣ ಪಾಕೀಟುಗಳಲ್ಲಿ ಹಾಕಿ ಅದರ ಕೊಡುಕೊಳ್ಳುವಿಕೆಯನ್ನು ಮಾಡಬೇಕು.

3. ಪರಸ್ಪರರನ್ನು ಭೇಟಿಯಾಗುವಾಗ, ಮಾತನಾಡುವಾಗ ಮಾಸ್ಕ್ ಅನ್ನು ಉಪಯೋಗಿಸಬೇಕು.

4. ನಮ್ಮಲ್ಲಿರುವ ‘ಸತ್ತ್ವಗುಣವನ್ನು ವೃದ್ಧಿಸುವುದು’ ಯಾವುದೇ ಹಬ್ಬ ಅಥವಾ ಉತ್ಸವವನ್ನು ಆಚರಿಸುವ ಉದ್ದೇಶವಾಗಿರುತ್ತದೆ. ಹಾಗಾಗಿ ಆಪತ್ಕಾಲೀನ ಪರಿಸ್ಥಿತಿಯಿಂದ ರೂಢಿಗನುಸಾರ ಹಬ್ಬ-ಉತ್ಸವಗಳನ್ನು ಆಚರಿಸಲು ಮಿತಿ ಉಂಟಾಗಿದ್ದರೂ ಆಯಾ ಸಮಯದಲ್ಲಿ ಈಶ್ವರನ ಹೆಚ್ಚುಹೆಚ್ಚು ನಾಮಸ್ಮರಣೆ, ಉಪಾಸನೆ, ನಾಮಜಪ ಇತ್ಯಾದಿಗಳನ್ನು ಮಾಡಿ ಸತ್ತ್ವಗುಣವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಆಗಲೇ ನಿಜವಾದ ಅರ್ಥದಿಂದ ಹಬ್ಬವನ್ನು ಆಚರಿಸಿದಂತಾಗುವುದು.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’)

ಸಂಗ್ರಹ :
ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 93425 99299)