ಪ್ರತಿಷ್ಠಿತ ಎಸ್. ಯು. ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಅಕ್ಷಯ ಆರ್.ಶೆಟ್ಟಿ ಪೆರಾರ ಮುಂಡ ಬೆಟ್ಟುಗುತ್ತು ಅವರ ದೆಂಗ ಕಾದಂಬರಿ ಆಯ್ಕೆ – ಕಹಳೆ ನ್ಯೂಸ್
ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ 2020-2021 ನೇ ಸಾಲಿನ ಪ್ರತಿಷ್ಠಿತ ಎಸ್. ಯು. ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಹಾಗೂ ಮ್ಯಾನೇಜ್ ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಅಕ್ಷಯ ಆರ್.ಶೆಟ್ಟಿ ಪೆರಾರ ಮುಂಡ ಬೆಟ್ಟುಗುತ್ತು ಅವರ ದೆಂಗ ಕಾದಂಬರಿ ಆಯ್ಕೆಯಾಗಿದೆ.
ಪ್ರಸ್ತುತ ಮಂಗಳೂರಿನ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿ0ಗ್ ಮತ್ತು ಮ್ಯಾನೆಜ್‌ಮೆಂಟ್ ಕಾಲೇಜಿನಲ್ಲಿ, ಸಹಾಯಕ ಪ್ರಾಧ್ಯಾಪಕಿಯಾಗಿ ಉದ್ಯೋಗ ನಿರ್ವಹಿಸುತ್ತಿರುವ ಅಕ್ಷಯ ಆರ್. ಶೆಟ್ಟಿ, ಪೆರಾರಮುಂಡಬೆಟ್ಟುಗುತ್ತು ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್.ಡಿ. ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಕ್ರೊ-ಬಯಾಲಜಿಯಲ್ಲಿ ವಿಜ್ಞಾನ ಪದವಿ, ಕನ್ನಡ ಸಾಹಿತ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಹಾಗೂ ಮಾನವ ಸಂಪನ್ಮೂಲದಲ್ಲಿ ಎಂ.ಬಿ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು, ಮಂಗಳೂರು ವಿಶ್ವವಿದ್ಯಾನಿಲಯದ ಕನಕ ದಾಸ ಸಂಶೋಧನ ಕೇಂದ್ರದಲಿ ಸಂಶೋಧನಾ ಸಹಾಯಕಳಾಗಿ ಹಾಗೂ ಜಿಲ್ಲಾ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಸಂಪನ್ಮೂಲ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಹಲವು ವರ್ಷ ಜಪಾನಿನ ಕ್ಯೋಟೋ ಯುನಿವರ್ಸಿಟಿಯ ಪ್ರಾಧ್ಯಾಪಕಿಯ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಬದುಕಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ಬರೆದ ಪ್ರಕಟಿತ ಕೃತಿಗಳಾದ, ಎಂ. ಎ. ವಿದ್ಯಾರ್ಥಿಯಾಗಿದ್ದಾಗ, ಜಾನಪದವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೋ. ಚಿನ್ನಪ್ಪ ಗೌಡ ಅವರ ಮದಿಪು ಪ್ರಕಾಶನದಿಂದ ಪ್ರಕಟಿತ ಕೃತಿ “ನನ್ನಹಾದಿ” , 2018 ರಲ್ಲಿ ‘ತುಡರ್’ ಪ್ರಕಾಶನದಿಂದ ಪ್ರಕಟಗೊಂಡ “ಬದುಕು ಭಾವದ ತೆನೆ”, ಮಂಗಳೂರು ವಿಶ್ವ ವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರ ಪ್ರಕಟಿಸಿರುವ ಕೃತಿಯ ಸಂಪಾದನೆ “ಕನಕಚಿಂತನ” (ಸಂಪಾದಿತಕೃತಿ)..
ಇವರಿಗೆ, ‘ಬದುಕು ಭಾವದ ತೆನೆ’ ಹಸ್ತ ಪ್ರತಿಗೆ 2018ರಲ್ಲಿ ಜಗಜ್ಯೋತಿಕಲಾವೃಂದ, ಮುಂಬೈ ಇವರು ರಾಷಟ್ರಮಟ್ಟದಲ್ಲಿ ಆಯೋಜಿಸಿದ್ದ ‘ಸುಶೀಲಾ ಶೆಟ್ಟಿಸ್ಮಾರಕ ದತ್ತಿ ನಿಧಿ ಕಾವ್ಯ ಪ್ರಶಸ್ತಿ’, ಬಿಡಿಕಥೆಗಳಿಗೆ, ರಾಜ್ಯಮಟ್ಟದ ಕರ್ನಾಟಕ ಲೆಖಕಿಯರ ಸಂಘ, ಬೆಂಗಳೂರು ಆಯೋಜಿಸಿದ್ದ ‘ತ್ರಿವೇಣಿ ದತ್ತಿ ನಿಧಿ ಪ್ರಶಸ್ತಿ’ ಹಾಗೂ ಸಂದೇಶ ಪ್ರತಿಷ್ಟಾನದ ‘ಬಾಂಧವ್ಯ ಪ್ರಶಸ್ತಿ’ ಲಭಿಸಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ, ‘ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಸಂಸ್ಕೃತಿ’ಎ0ಬ ವಿಷಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಎರಡು ಘಂಟೆಗಳ ಉಪನ್ಯಾಸವನ್ನು ನೀಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಆಯೋಜಿಸಿದ್ದ ಪ್ರಾದೇಶಿಕ ಭಾಷೆಯ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದಾರೆ. ಲಿಂಗಸಮಾನತೆಯ ಕುರಿತ ಸಂದರ್ಶನ ನಾರ್ವೆ ದೇಶದ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್, ಕಲ್ಕೂರ ಪ್ರತಿಷ್ಟಾನ, ಅಬ್ಬಕ್ಕ ಉತ್ಸವ ಮತ್ತು ಬೇರೆ ಬೇರೆ ಸಂಘ ಸಂಸ್ಥೆಗಳು ಆಯೋಜಿಸಿದ್ದ ಕವಿಗೋಷ್ಟಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಹಾಗೂ ಮೆಚ್ಚುಗೆಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ, ಸಾಹಿತ್ಯಿಕ ಸಾಧನೆಗಳನ್ನು ಮಾಡಿದ್ದಾರೆ.