ಪುತ್ತೂರು: ನರೇಂದ್ರ ಪ.ಪೂ.ಕಾಲೇಜಿನಲ್ಲಿ ಆಯೋಜಿಸಿದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾದ ಆಶಾ ಬೆಳ್ಳಾರೆ ಯುವ ಜನತೆಗೆ ಸ್ಪೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿರುತ್ತಿದ್ದವು. ಯುವಜನತೆಯ ಆದರ್ಶವಾಗಿರುವ ಈ ವೀರ ಸನ್ಯಾಸಿಯ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸಲಾಗುತ್ತಿದೆ.ಸ್ವಾಮಿ ವಿವೇಕಾನಂದರು ಬೆಳಗಿದ ಜ್ಞಾನದ ದೀವಿಗೆ ಜಗತ್ತಿನ ಅದೆಷ್ಟೋ ಯುವಕ, ಯುವತಿಯರ ಬದುಕಿನಲ್ಲಿ ಹೊಸ ಚೈತನ್ಯ ತಂದಿದೆ. ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕøತಿ, ಸಿರಿವಂತಿಕೆ, ಜ್ಞಾನ, ಧರ್ಮ ಇವೆಲ್ಲದರ ವಿರಾಟ್ ರಾಯಭಾರಿಯಾಗಿದ್ದರು. ತಮ್ಮ ಪ್ರಖರ ಚಿಂತನೆ, ಸಮಾಜವನ್ನು ತಿದ್ದುವ ಸಂದೇಶಗಳ ಮೂಲಕವೇ ಜನತೆಯ ಮನಗೆದ್ದಿದ್ದರು.ವಿವೇಕಾನಂದರು ತಮ್ಮ ಸಂದೇಶ, ತತ್ವ, ಆದರ್ಶ, ಚಿಂತನೆಗಳ ಮೂಲಕ ಅಮರರಾಗಿದ್ದಾರೆ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ ಅವರು ಮಾತನಾಡಿ,ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಿ, ಯುವ ಜನತೆಯಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.ಅಂತಹ ವ್ಯಕ್ತಿತ್ವದ ತತ್ವಾದರ್ಶಗಳನ್ನು ನಾವೆಲ್ಲರೂ ಪರಿಪಾಲಿಸೋಣ ಎಂದು ಹೇಳಿದರು.
ಮುಂಡೂರಿನ ಹಿಂದಾರು ಗೋಶಾಲೆಯ ಮಾಲಕರಾದ ಜಯಗುರು ಆಚಾರ್ ಅವರು ಮಾತನಾಡಿ ಯುವಕರನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡಲು ಪ್ರೇರೇಪಿಸಿದ್ದಾರೆ ಸ್ವಾಮಿ ವಿವೇಕಾನಂದರು. ನಮ್ಮ ರಾಷ್ಟ್ರಕ್ಕಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಉಪನ್ಯಾಸಕರಾದ ಶ್ರೀಮತಿ ಸೌಮ್ಯ ವಂದಿಸಿದರು. ಶ್ರೀಮತಿ ಮಧುರಾ ಕಾರ್ಯಕ್ರಮವನ್ನು ನಿರೂಪಿಸಿದರು.