ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ : ಪ್ರಥಮ ದಿನದ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಭಾಗಿ – ಕಹಳೆ ನ್ಯೂಸ್
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ರಥಬೀದಿ, ಮಂಗಳೂರು ಇಲ್ಲಿ ಬ್ರಹ್ಮ ಕಲಶೋತ್ಸವದ ಅಂಗವಾಗಿ ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಕ್ಷೇತ್ರದ ಕಲಾ ರಂಗ ಮಂಟಪವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಜಿಯವರು ಕರಾವಳಿ ಕರ್ನಾಟಕದ ಕಾಳಿಕಾಂಬಾ ಕ್ಷೇತ್ರಗಳಲ್ಲಿ ಅತ್ಯಂತ ಮನಮೋಹಕವಾಗಿ ಮಂಗಳೂರಿನ ಶ್ರೀ ಕಾಳಿಕಾಂಬಾ ಕ್ಷೇತ್ರವು ನಿರ್ಮಾಣಗೊಂಡಿದ್ದು, ಶಿಲಾ ಶಿಲ್ಪ, ಕಾಷ್ಟ ಶಿಲ್ಪ ಕೆಲಸವು ನೋಡುಗರ ಕಣ್ಮನ ತುಂಬುವಂತಾಗಿದೆ.
ಕೋವಿಡ್ ನಿಂದಾಗಿ ಸರಕಾರದ ನಿಯಮವನ್ನು ಪಾಲಿಸಿಕೊಂಡು ಕ್ಷೇತ್ರದ ಬ್ರಹ್ಮಕಲಶದ ಸಂದರ್ಭ ದೇವಿಯ ಪ್ರೀತ್ಯರ್ಥ ನಡೆಯುವ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೆಲ್ಲವೂ ಕಾಳಿಕಾಂಬಾ ಅಮ್ಮನವರ ಆಶೀರ್ವಾದದಿಂದ ಯಶಸ್ವೀ ಯಾಗಿ ಸಂಪನ್ನಗೊಳ್ಳಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ.ಕೇಶವ ಆಚಾರ್ಯ, 2ನೇ ಮೊಕ್ತೇಸರ ಬೆಳುವಾಯಿ ಸುಂದರ ಆಚಾರ್ಯ, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಟಿ ದಿನೇಶ್ ಶಕ್ತಿನಗರ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ. ವೆಂಕಟೇಶ್ ಆಚಾರ್, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎಂ. ಡಿ. ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪಶುಪತಿ ಉಳ್ಳಾಲ್ ಕಾರ್ಯಕ್ರಮದ ನಿರೂಪಿಸಿದರು. ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಶ್ರೀ ಕಾಳಿಕಾಂಬಾ ಸೇವಾಸಮಿತಿಯ ಪ್ರಾಯೋಜಕತ್ವದಲ್ಲಿ ಹವ್ಯಾಸಿ ಬಳಗ ಕದ್ರಿ ತಂಡದಿಂದ “ಜಾಂಬವತಿ ಕಲ್ಯಾಣ ” ಯಕ್ಷಗಾನ ಬಯಲಾಟವು ಸೀಮಿತ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಜರುಗಿತು.