Recent Posts

Thursday, November 21, 2024
ಕಾಸರಗೋಡುಬದಿಯಡ್ಕಮಂಜೇಶ್ವರಸಂತಾಪಸುದ್ದಿ

265ರಷ್ಟು ಮನೆಗಳನ್ನು ನಿರ್ಮಿಸಿ ಕೊಡುಗಡೆ ನೀಡಿದ್ದ ಕಾಸರಗೋಡಿನ ಕೊಡುಗೈ ದಾನಿ, ಸಮಾಜ ಸೇವಕ ಸಾಯಿರಾಂ ಗೋಪಾಲಕೃಷ್ಣ ಭಟ್ ನಿಧನ – ಕಹಳೆ ನ್ಯೂಸ್

ಕಾಸರಗೋಡು, ಜ 22 : ಕೊಡುಗೈ ದಾನಿ, ಸಮಾಜ ಸೇವಕ, ಸಾಯಿರಾಂ ಗೋಪಾಲಕೃಷ್ಣ ಭಟ್(85) ಅವರು ಶನಿವಾರ ಮಧ್ಯಾಹ್ನ ಕಿಳಿಂಗಾರಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಸಾಯಿರಾಂ ಗೋಪಾಲಕೃಷ್ಣ ಅವರು ಜಾತಿ, ಮತ, ಭೇದ ವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ 265ರಷ್ಟು ನಿರ್ಮಿಸಿ ನೀಡುವ  ಮೂಲಕ ಸೇವೆ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಡ ಕುಟುಂಬಗಳಿಗೆ ಮನೆ, ಸ್ವ ಉದ್ಯೋಗಕ್ಕೆ ಸಹಾಯ ನೀಡುತ್ತಿದ್ದರು. ಈಗಾಗಲೇ ಅಲ್ಲದೆ ಅದೆಷ್ಟೋ ಕುಟುಂಬಗಳಿಗೆ ಆರ್ಥಿವಾಗಿಯೂ ಸಹಕಾರ ನೀಡಿದ್ದರು. ಶ್ರೀ ಸತ್ಯ ಸಾಯಿಬಾಬಾ ಅವರ ಅಪ್ರತಿಮ ಭಕ್ತರಾಗಿ ‘ಸಾಯಿರಾಂ ಭಟ್’ ಎಂದೇ ಖ್ಯಾತರಾಗಿದ್ದರು. ಕಿಳಿಂಗಾರಿನಲ್ಲಿ ಶ್ರೀ ಸಾಯಿ ಮಂದಿರವನ್ನು ಸ್ಥಾಪಿಸಿದ್ದರು. ಉಚಿತ ಆರೋಗ್ಯ ಶಿಬಿರ ಸಹಿತ ಆನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಪತ್ನಿ ಶಾರದಾ ಭಟ್, ಪುತ್ರ, ಬದಿಯಡ್ಕ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎನ್. ಕೃಷ್ಣ ಭಟ್, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪುತ್ರಿಯರಾದ ಶ್ಯಾಮಲಾ, ವಸಂತಿ ಹಾಗೂ ಅಪಾರ ಅಭಿಮಾನಿಗಳು, ಬಂಧು ಮಿತ್ರರನ್ನು ಅಗಲಿದ್ದಾರೆ.

ಸಮಾಜದ ಉನ್ನತಿಗಾಗಿ ವೈಯಕ್ತಿಕವಾಗಿ ರಂಗಕ್ಕಿಳಿದು ನಿಸ್ವಾರ್ಥ ಸೇವೆ ಮಾಡುವ ಮೂಲಕ ಬಡ-ನಿರ್ಗತಿಕರ ಕಣ್ಣೀರೊರೆಸಿದ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಸಮಾಜ ಸೇವೆಗೆ ಹತ್ತಾರು ವರ್ಷಗಳ ಇತಿಹಾಸವಿದೆ.

ಸುಮಾರು 25 ವರ್ಷಗಳ ಹಿಂದೆ ಉಚಿತ ವೈದ್ಯಕೀಯ ಶಿಬಿರಕ್ಕೆ ಸಾಯಿರಾಂ ಭಟ್ ಚಾಲನೆ ನೀಡಿದ್ದರು. ಈ ಮಾದರಿಯ ಶಿಬಿರಗಳು ಇಂದಿಗೂ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಉಚಿತವಾಗಿ ಆಯೋಜಿಸುತ್ತಲಿವೆ. ಸಾಯಿಬಾಬಾರ ಪರಮ ಭಕ್ತರಾಗಿದ್ದ ಭಟ್ ಅವರು 1996 ನವೆಂಬರ್ 23ರಂದು ಬಾಬಾರ ಜನ್ಮದಿನದಂದು ಕಿಳಿಂಗಾರು ಎಎಲ್‌ಪಿ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿದ್ದರು.

ಹಾಗೆ ಚಾಲನೆ ನೀಡಿದವರು ಮುಂದೆ 2015ರ ವೇಳೆಗೆ ಇಂಥಹ 933 ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದರು. ಮುಂದೆ ಆಯೋಜಿಸಿದ್ದನ್ನೂ ಲೆಕ್ಕ ಹಾಕಿದಲ್ಲಿ ಇವುಗಳು ಸಾವಿರ ದಾಟುವುದರಲ್ಲಿ ಯಾವುದೇ ಸಂದೇಹವಿಲ್ಲ. ಲಕ್ಷಾಂತರ ಮಂದಿಗೆ ಉಚಿತ ಚಿಕಿತ್ಸೆ, ಔಷಧ ನೀಡಿದ್ದರು. ಹಲವಾರು ಕುಟುಂಬಗಳಿಗೆ ನೌಕರಿ, 265 ನಿರ್ಗತಿಕ ಕುಟುಂಬಗಳಿಗೆ ಉಚಿತ ಮನೆ ನಿರ್ಮಿಸಿ ನೀಡಿ ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದರು. ಪರರ ಸೇವೆಯಲ್ಲೇ ಜೀವನ ಮುಡಿಪಾಗಿಟ್ಟ ಈ ಮಹಾನ್ ವ್ಯಕ್ತಿ ತನ್ನ ಹುಟ್ಟುಹಬ್ಬವನ್ನು ಯಾವುದೇ ಸಂಭ್ರಮಗಳೊಂದಿಗೆ ಆಚರಿಸುತ್ತಿರಲಿಲ್ಲ.

1937ರಲ್ಲಿ ನೀರ್ಚಾಲು ಕಿಳಿಂಗಾರಿನಲ್ಲಿ ಜನಿಸಿದ ಗೋಪಾಲಕೃಷ್ಣ ಭಟ್ ಮೊದಲು ತಾಲೀಮು ತರಬೇತುದಾರರಾಗಿದ್ದರು. ಬಳಿಕದ ದಿನಗಳಲ್ಲಿ ಬಸ್ ಮಾಲೀಕರಾಗಿ ಕಾರ್ಯನಿರ್ವಹಿಸಿ ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡರು. ಮುಂದೆ ಸಮಾಜ ಸೇವೆಯತ್ತ ಅವರ ಮನಸ್ಸು ವಾಲಿತು. ರೋಗ ಬಾಧಿತರಾಗಿ ಬದುಕಿನ ಹಾದಿ ಹುಡುಕುವವರು, ನೌಕರಿ ಇಲ್ಲದೆ ಪರಿತಪಿಸುವವರು, ವಸತಿ ಸೌಲಭ್ಯವಿಲ್ಲದೆ ಕಂಗೆಟ್ಟವರು, ಆರ್ಥಿಕವಾಗಿ ಹಿಂದುಳಿದು ವಿದ್ಯಾರ್ಜನೆ ಮಾಡಲು ತೊಂದರೆ ಅನುಭವಿಸುವವರು ನೀರ್ಚಾಲು ಕಿಳಿಂಗಾರಿನ ಸಾಯಿಮಂದಿರವನ್ನು ಹುಡುಕಿ ಬರುವುದು ರೂಢಿಯೇ ಆಗಿತ್ತು. ತನ್ನಿಂದ ಸಹಾಯ ಲಭಿಸಿದವರು ಅನುಭವಿಸುವ ಸಂತೋಷವೇ ತನಗೆ ಆನಂದವನ್ನೀಯುತ್ತದೆ ಎನ್ನುತ್ತಿದ್ದರು ಸಾಯಿರಾಂ ಭಟ್.

25-26 ವರ್ಷಗಳ ಹಿಂದಿನ ಘಟನೆ. ಕಾಸರಗೋಡು ಖಾಸಗಿ ಆಸ್ಪತ್ರೆಯೊಂದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕೇಶವ ಭಟ್ ಅವರು ಸಾಯಿರಾಂ ಭಟ್‌ರವರನ್ನು ಅರಸಿ ಬಂದರು. ದೈಹಿಕ ಹಾಗೂ ಸಾಮಾಜಿಕವಾಗಿ ಕಷ್ಟ ಅನುಭವಿಸುತ್ತಿರುವ ನಿರ್ಗತಿಕರಿಗೆ ಉಚಿತ ಚಿಕಿತ್ಸೆ ಎಂಬ ಧ್ಯೇಯದೊಂದಿಗೆ ಮುನ್ನಡೆದ ಸಾಯಿರಾಂ ಭಟ್, ಉಚಿತ ವೈದ್ಯಕೀಯ ಶಿಬಿರ ಎಂಬ ಆಶಯವನ್ನು ಆ ವೈದ್ಯರ ಮುಂದಿಟ್ಟರು. ವೈದ್ಯರ ಜತೆ ಸಾಯಿಬಾಬಾ ಸನ್ನಿಧಿಯಲ್ಲಿ ತಮ್ಮ ಆಗ್ರಹವನ್ನು ಮಂಡಿಸಿದರು. ಮುಂದೆ ಸಮಾಜ ಸೇವೆಯೇ ಅವರ ಧ್ಯೇಯವಾಯಿತು.

ಮುಂದೆ ಡಾ. ಕೇಶವ ಭಟ್ ಕಾಸರಗೋಡಿನ ಸೇವೆಯನ್ನು ಪೂರೈಸಿ ತೆರಳಿದರೂ ವೈದ್ಯಕೀಯ ಶಿಬಿರಗಳು ಕೊನೆಯಾಗಿರಲಿಲ್ಲ. ಸಾಯಿರಾಂ ಅವರ ನಿವಾಸದ ಅನತಿ ದೂರದಲ್ಲಿರುವ ಸಾಯಿ ಮಂದಿರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯುತ್ತಲೇ ಇತ್ತು. ಹರತಾಳ, ಬಸ್ ಮುಷ್ಕರಗಳು ನಡೆದರೂ ಶಿಬಿರಗಳು ಯಾವುದೇ ಕೊರತೆ ಇಲ್ಲದೆ ಸಾಂಗವಾಗಿ ಮುಂದುವರಿದಿದ್ದವು. ನೀರ್ಚಾಲು ಪ್ರದೇಶ ನಿವಾಸಿಗಳು ಮಾತ್ರವಲ್ಲ ಜಿಲ್ಲೆಯ ವಿವಿಧೆಡೆಗಳಿಂದ ಹಾಗೂ ಹೊರಜಿಲ್ಲೆಗಳಿಂದ ನೂರಾರು ಮಂದಿ ಶಿಬಿರದಲ್ಲಿ ಭಾಗವಹಿಸುತ್ತಿದ್ದರು. ಅಲೋಪತಿ-ಆಯುರ್ವೇದ ವೈದ್ಯರು ಶಿಬಿರಾರ್ಥಿಗಳ ತಪಾಸಣೆ ನಡೆಸುತ್ತಿದ್ದರು. ಒಂದೊಂದು ಶಿಬಿರಗಳಲ್ಲಿಯೂ 700ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದರು ಎನ್ನುತ್ತಾರೆ ಇಲ್ಲಿನ ಪರಿಸರದ ನಿವಾಸಿಗಳು.

ಶಿಬಿರಾರ್ಥಿಗಳಿಗೆ 15 ದಿನಗಳ ಉಚಿತ ಔಷಧ ನೀಡಲಾಗುತ್ತಿತ್ತು ಎಂದು ಇವರ ಸೇವೆಗೆ 20 ವರ್ಷ ತುಂಬಿದಾಗ ಶಿಬಿರಗಳಲ್ಲಿ ರೋಗಿಗಳ ತಪಾಸಣೆ ನಡೆಸುತ್ತಿತ್ತ ಡಾ. ಕೆ. ಕೆ. ನಾಯರ್ ಹೇಳಿದ್ದರು. ಕ್ಯಾನ್ಸರ್, ಏಡ್ಸ್‌ ಮೊದಲಾದ ಎಲ್ಲ ರೋಗಗಳಿಗೆ ಶಿಬಿರದಲ್ಲಿ ಔಷಧ ನೀಡಲಾಗುತ್ತಿತ್ತು. ವೈದ್ಯರಾದ ಮೊಹನ್ ಕೋಡೋತ್, ಸತ್ಯನಾರಾಯಣ, ಶ್ರೀನಿಧಿ ಸರಳಾಯ, ಬೀನ ಸಿ. ಶೆಟ್ಟಿ, ಸುನಿಲ್ ಮೊದಲಾದವರು ಶಿಬಿರದಲ್ಲಿ ರೋಗಿಗಳ ಆರೈಕೆ ಮಾಡುತ್ತಿದ್ದರು.

ಸಾಯಿರಾಂ ಗೊಪಾಲಕೃಷ್ಣ ಭಟ್ ಅವರ ಸಮಾಜ ಸೇವೆ ಜನಮನದಲ್ಲಿ ಅಭಿನಂದನಾರ್ಹವಾಗಿ ಉಳಿದುಕೊಂಡಿವೆ. ಜತೆಗೆ ಅವರಿಗೆ ಕೇರಳ ಹಾಗೂ ಕರ್ನಾಟಕ ಸರಕಾರದಿಂದ, ಸ್ಥಳೀಯ ಸಂಘಟನೆಗಳಿಂದ ವಿವಿಧ ಪ್ರಶಸ್ತಿ ಸನ್ಮಾನ ಗೌರವಗಳೂ ಅವರಿಗೆ ಲಭಿಸಿವೆ.