Saturday, September 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಚಿಗುರು ವಿಭಾಗದ ವತಿಯಿಂದ ಸಂಯೋಜಿಸಲಾದ ವಿದ್ಯಾರ್ಥಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ, ಮಾನ್ಯ ನಿವೃತ್ತ ಸಹಾಯಕ ಪ್ರಾಧ್ಯಾಪಕ ಹಾಗೂ ಸಾಹಿತಿ ಜಯಾನಂದ ಪೆರಾಜೆ ಅವರು ಕವಿತೆಗಳು ಸ್ಫೂರ್ತಿಯ ಸೆಲೆ. ಕಾವ್ಯ ರಚನೆಯಲ್ಲಿ ಆತ್ಮಸಂತೋಷ ಮತ್ತು ಮನೋವಿಕಾಸ ಅಡಗಿದೆ. ಅಂತರಾಳವಾಗಿ ಮೂಡಿ ಬಂದ ಕವನಗಳು ಹೆಚ್ಚು ಸಂಭ್ರಮದಿಂದ ಕೂಡಿ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ರವಿ ಕಾಣದನ್ನು ಕವಿಕಂಡ ಎಂಬ ಮಾತಿದೆ. ನಮ್ಮ ಭಾವನೆಗಳು, ಕಲ್ಪನೆಗಳನ್ನು ಪದಪುಂಜಗಳ ಅರ್ಥಗರ್ಭಿತ ಜೋಡಣೆಯ ಮೂಲಕ ಲಿಖಿತ ಸ್ವರೂಪ ಕೊಟ್ಟು ಚೆಂದಗಾಣಿಸುವ ಅದ್ಭುತ ಶಕ್ತಿ ಕವಿಯದ್ದು. ಒಂದು ವಿಷಯವನ್ನು ನಾವು ಊಹಿಸಲೂ ಸಾಧ್ಯವಿರದ ವಿಭಿನ್ನ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಸಾಮರ್ಥ್ಯ ಕವಿಗಿದೆ. ಯಾವುದೇ ಘಟನೆಯನ್ನು ಕೇವಲ ಮೇಲ್ನೋಟಕ್ಕೆ ನಿರ್ಧರಿಸದೆ ಅಥವಾ ಗ್ರಹಿಸದೇ ಅದರೊಳಹನ್ನು ಅನುಭವಿಸಿ ಪರಿಭಾವಿಸಿದಾಗಷ್ಟೇ ಆ ಕಾವ್ಯ ಯಶಸ್ವಿ ಎಂದೆನಿಸಿಕೊಳ್ಳುತ್ತದೆ ಮತ್ತು ಇದನ್ನು ಲೇಖನಿಯ ಮೂಲಕ ಹೊರಗಿಟ್ಟು ಪರಿಚಯಿಸಿಕೊಡುವವನೇ ಒಬ್ಬ ಸಮರ್ಥ ಕವಿ. ಹೇಳುವ ವಿಷಯವನ್ನೇ ಕಾವ್ಯಾತ್ಮಕವಾಗಿ ಹೇಳಿ ಅದರ ಸೌಂದರ್ಯ ಹೆಚ್ಚಿಸುವುದು ಕವನಕ್ಕಿರುವ ವ್ಯಾಪ್ತಿಯನ್ನು ತಿಳಿಸುತ್ತದೆ. ಕತ್ತಲೆಯಿಂದ ಬೆಳಕಿನ ಕಡೆಗೆ ತರುವಂಥ ಸಾಮರ್ಥ್ಯ ಕವಿಗೆ ಇದೆ. ಕವಿತೆ ಜೀವಂತವಾಗಿರಲು ಅನುಭವ ಬೇಕಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ರುಚಿ ಹತ್ತಲು ಓದಿನ ಕಮಟವೂ ಅಗತ್ಯವಾಗಿ ನಡೆಯಬೇಕಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮಾತನಾಡಿ ಕವಿತೆಯು ನೋಡಿದ್ದನ್ನು ಕೇಳಿದ್ದನ್ನು ರಸವತ್ತಾಗಿ ತೆರೆದಿಡಬೇಕು. ಕಾವ್ಯ ಅಂತರಾಳದ ನೋವಿಗೆ ಕನ್ನಡಿ ಹಿಡಿಯುವಂತ್ತಿರಬೇಕು. ಹಾವ ಭಾವ, ಅನುಭಾವ ಸಂಯೋಗ ಹೊಂದಿರಬೇಕು. ಉತ್ತಮ ಬರವಣಿಗೆ ಸಾಧ್ಯವಾಗಬೇಕಾದರೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಅತೀ ಅವಶ್ಯಕ. ಇದಕ್ಕಾಗಿ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಪುಷ್ಪಲತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಕಾಲೇಜಿನ ಬೋಧಕ- ಬೊಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಈಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ವರ್ಷಾ ಸ್ವಾಗತಿಸಿ ದೇವಯಾನಿ ವಂದಿಸಿದರು.