ಅಂಬಿಕಾ ಕಾಲೇಜಿನ ವಾಣಿಜ್ಯ ವಿಭಾಗದಿಂದ ಬ್ಯಾಂಕಿಂಗ್ ಜ್ಞಾನದ ಬಗೆಗೆ ಉಪನ್ಯಾಸ- ಕಹಳೆ ನ್ಯೂಸ್
ಪುತ್ತೂರು: ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ಬ್ಯಾಂಕ್ ವಹಿವಾಟಿನ ಮೂಲಭೂತ ಜ್ಞಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಕರ್ನಾಟಕ ಬ್ಯಾಂಕ್‍ನ ಮ್ಯಾನೇಜರ್ ಶೈಲೇಶ್ ಎಂ.ಎಲ್. ರವರು ಮಾತನಾಡುತ್ತಾ, ಎಟಿಎಮ್ ಕಾರ್ಡ್, ವೀಸಾ ಕಾರ್ಡ್, ಪಾನ್ ಕಾರ್ಡ್ ಮುಂತಾದವುಗಳನ್ನು ಬಳಸುವಾಗ ಗ್ರಾಹಕರು ಜಾಗ್ರತೆ ವಹಿಸಬೇಕು. ಇಲ್ಲದಿದ್ದಲ್ಲಿ ಅದರಿಂದಾಗಿ ಸಾಕಷ್ಟು ತೊಂದರೆಗೊಳಗಾಗುವ ಸಂದರ್ಭಗಳು ಎದುರಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ , ಬ್ಯಾಕಿಂಗ್ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದಿಂದಲೇ ವ್ಯವಹಾರ ಜ್ಞಾನವನ್ನು ಬೆಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಹಣದ ಬೆಲೆ ತಿಳಿಯುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಮಕ್ಕಳು ಎಲ್ಲಾ ಕಾರ್ಯಚಟುವಟಿಕೆಗಳಿಗೂ ಹೆತ್ತವರನ್ನೇ ಅವಲಂಬಿಸಬಾರದು. ದಿನನಿತ್ಯದ ಆಗುಹೋಗುಗಳನ್ನು ತಾವೇ ನಿಭಾಯಿಸುವ ಕೌಶಲವನ್ನು ಬೆಳಿಸಿಕೊಳ್ಳಬೇಕು. ವ್ಯವಸ್ಥೆಗಳು ಬದಲಾವಣೆಯಾಗುತ್ತಿದ್ದಂತೆಯೇ ಮಕ್ಕಳು ಕೂಡಾ ಅವುಗಳನ್ನು ಅರಗಿಸಿ, ಜೀವನಕ್ಕೆ ಅಳವಡಿಸಬೇಕು ಎಂದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಚೈತನ್ಯಾ ಪ್ರಾರ್ಥಿಸಿ, ವಿಭಾಗದ ವಿದ್ಯಾರ್ಥಿ ರಾಹುಲ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ಮನೋಜ್ ವಂದಿಸಿ, ವಿದ್ಯಾರ್ಥಿ ಶ್ರೀರಾಮ ಕಾರ್ಯಕ್ರಮ ನಿರೂಪಿಸಿದರು.