ಮಲ್ಪೆ: ಬಂದರಿನ ಸನ್ಮಯ ಬೋಟಿನ ಬಲೆಗೆ 60 ಕೆ.ಜಿ. ತೂಕದ ಮಡಲು ಮೀನು ಬಿದ್ದಿದ್ದು, ಈ ಮೀನನ್ನು ನೋಡಲು ಜನ ಜಮಾಯಿಸಿದರು.
ಈ ಮೀನು ಗಂಟೆಗೆ 110 ಕಿ.ಮೀ. ನಂತೆ ಜಗತ್ತಿನಾದ್ಯಂತ ಇತರ ಮೀನುಗಳಿಗಿಂತ ವೇಗವಾಗಿ ಚಲಿಸುತ್ತದೆ. ಅಲ್ಲದೆ ಇದು ಬಂಗುಡೆ, ಬೂತಾಯಿ, ಅಕ್ಟೋಪಸ್ ಇನ್ನಿತರ ಮೀನಗಳನ್ನು ತಿನ್ನುತ್ತದೆ.
ಇದರಲ್ಲಿ ಮರ್ಲಿನ್ ಎಂಬ ಜಾತಿಯ ಮೀನೂ ಇದ್ದು, ಇದರ ಮಾಂಸ ರುಚಿಕರವಾಗಿರುತ್ತದೆ ಎಂದು ಕಡಲಜೀವಿ ಶಾಸ್ತ್ರದ ಸಂಶೋಧಕ ಕಾರವಾರದ ಡಾ| ಶಿವಕುಮಾರ್ ಹರಗಿ ತಿಳಿಸಿದ್ದಾರೆ.
ಮಡಲು ಮೀನು ಕೆ.ಜಿ.ಗೆ ಸುಮಾರು 120 ರೂಪಾಯಿಯಂತೆ ಮಾರಾಟವಾಗಿದ್ದು, ಸಾಮಾನ್ಯವಾಗಿ 35 ಕೆ.ಜಿ. ವರೆಗೆ ಬಂದಿದ್ದರೂ ಈ ಮೀನು 60 ಕೆ.ಜಿ. ಇರುವುದು ಬಲು ಅಪರೂಪ ಎಂದು ಮೀನು ವ್ಯಾಪಾರಿ ವಿಕ್ರಮ್ ಹೇಳಿದ್ದಾರೆ. ವೈಜ್ಞಾನಿಕವಾಗಿ ಸೈಲ್ ಮೀನು ಎಂದು ಕರೆಯಲಾಗುತ್ತಿದ್ದು, ಸ್ಥಳೀಯವಾಗಿ ಮಡಲಿನ ಆಕೃತಿ (ತೆಂಗಿನ ಸೋಗೆ) ಇರುವುದರಿಂದ ಮಡಲು ಮೀನು ಎಂದು ಕರೆಯುತ್ತಾರೆ.