ರಾಜ್ಯದ 25A ದರ್ಜೆ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ‘ದೈವ ಸಂಕಲ್ಪ’ ಯೋಜನೆ : ಶಶಿಕಲಾ ಜೊಲ್ಲೆ – ಕಹಳೆ ನ್ಯೂಸ್
– ಪ್ರತಿವರ್ಷ 1000ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ
– 12 ಜ್ಯೋತಿರ್ಲಿಂಗ ದರ್ಶನ, ಅಷ್ಟ ವಿನಾಯಕ ಯಾತ್ರೆ, ಕಾಶೀ ಯಾತ್ರೆಗೆ ಪ್ರೋತ್ಸಾಹ ಧನ
– ತಸ್ಥಿಕ್ ಹಣ ಹೆಚ್ಚಳಕ್ಕೂ ಸರ್ಕಾರಕ್ಕೆ ಪ್ರಸ್ಥಾವನೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಯ ಕನಸನ್ನು ರಾಜ್ಯದಲ್ಲೂ ನನಸು ಮಾಡುವ ನಿಟ್ಟಿನಲ್ಲಿ ನೂತನ ಯೋಜನೆ ‘ದೈವ ಸಂಕಲ್ಪ’ ವನ್ನು ಮುಜರಾಯಿ ಇಲಾಖೆಯ ವತಿಯಿಂದ ಪ್ರಾರಂಭಿಸಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ಪ್ರಕಟಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕಾಶಿಯನ್ನು ಅಭಿವೃದ್ಧಿಗೊಳಿಸಿದಂತೆ ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ 25 ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ರೂಪಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ 25 ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದ ಮೂಲಭೂತ ಸೌಕರ್ಯ, ಒಣ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಸರ್ವತೋಮುಖ ಅಭಿವೃದ್ದಿಗೊಳಿಸುವ ಯೋಜನೆ ಇದಾಗಲಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಯಾವುದೇ ತೊಂದರೆ ಅಗದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕು. ದೇವಸ್ಥಾನಕ್ಕೆ ಅವರು ನೀಡುವ ಕಾಣಿಕೆಗಳು ಪಾರದರ್ಶಕತೆಯಿಂದ ಸದುಪಯೋಗ ಆಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅಭಿವೃದ್ದಿಗೊಳಿಸುವುದು ನನ್ನ ಮಹತ್ವದ ಕನಸಾಗಿದ್ದು, ಈ ಯೋಜನೆಯ ಮೊದಲ ಹಂತದ ಅಂದಾಜು ವೆಚ್ಚ 1,140 ಕೋಟಿ ರೂಪಾಯಿಗಳಾಗಿವೆ ಎಂದು ಹೇಳಿದರು.
ಪ್ರತಿವರ್ಷ 1000 ಸಿ ದರ್ಜೆಯ ದೇವಸ್ಥಾನಗಳ ಸಮಗ್ರ ಅಭಿವೃದ್ದಿ:
ಕಡಿಮೆ ಆದಾಯವಿರುವ ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ದಿ ಸರಿಯಾಗಿ ಅಗುತ್ತಿಲ್ಲ ಎನ್ನುವ ಹಲವಾರು ದೂರುಗಳು ಬಂದಿವೆ. ರಾಜ್ಯದಲ್ಲಿ 34,217ಸಿ ದರ್ಜೆಯ ದೇವಸ್ಥಾನಗಳು ಇವೆ. ಪ್ರತಿವರ್ಷ ಇವುಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಅನುದಾನ ನೀಡಲಾಗುತ್ತಿದೆ. ಆದರೂ, ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಪ್ರತಿವರ್ಷ 1000ಸಿ ದರ್ಜೆಯ ದೇವಸ್ಥಾನಗಳನ್ನು ಸಮಗ್ರ ಅಭಿವೃದ್ಧಿಗೊಳಿಸಲು ಕ್ರಮಕೈಗೊಳ್ಳಲಿದ್ದೇವೆ. ಸರ್ಕಾರದ ವತಿಯಿಂದ ಅನುದಾನ ಹಾಗೆಯೇ ದಾನಿಗಳ ಸಹಯೋಗದೊಂದಿಗೆ ಸಮಗ್ರ ಅಭಿವೃದ್ದಿಗೊಳಿಸಲಾಗುವುದು. ಪ್ರತಿವರ್ಷ ಜಿಲ್ಲೆಯಲ್ಲಿ ಬೇರೆ, ಬೇರೇ ದೇವಸ್ಥಾನಗಳನ್ನು ಅಭಿವೃದ್ಧಿಗೆ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲಾ ಸಿ ದರ್ಜೆಯ ದೇವಸ್ಥಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಇಂದು ವಿಕಾಸಸೌಧದಲ್ಲಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಮುಂಬರುವ ವಾರ್ಷಿಕ ಆಯವ್ಯಯ (ಬಜೆಟ್) ಪ್ರಸ್ತಾವನೆ ಕುರಿತು ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. #Bengalore | #Budget2022 | #WaqfBoard pic.twitter.com/W9UfnrbBxD
— Shashikala Jolle (@ShashikalaJolle) February 4, 2022