ಉಳ್ಳಾಲ : ವಿದೇಶಕ್ಕೆ ತೆರಳುತ್ತೇನೆ ಎಂದು ಮನೆಯವರಲ್ಲಿ ಮತ್ತು ಸ್ನೇಹಿತರಲ್ಲಿ ತಿಳಿಸಿದ್ದ ವ್ಯಕ್ತಿಯೋರ್ವ ತಡರಾತ್ರಿ ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಗೈದಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಕುತ್ತಾರು ತೇವುಲ ನಿವಾಸಿಯಾಗಿರುವ ಸುರೇಶ್ ಸಾಲಿಯಾನ್ (48) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಹಲವು ವರ್ಷಗಳಿಂದ ತೊಕ್ಕೊಟ್ಟಿನಲ್ಲಿ ಪ್ಲ್ಯಾನಿಂಗ್ ಪ್ಯಾಲೇಸ್ ಮೂಲಕ ಆರ್ಕಿಟೆಕ್ಟ್, ಭೂ ವ್ಯವಹಾರ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಫೆ.08 ರಂದು ಮನೆಯಿಂದ ಬರುವಾಗ ತಾನು ವಿದೇಶಕ್ಕೆ ತೆರಳುತ್ತೇನೆ ಎಂದು ತಿಳಿಸಿ ಕಾರು ಮತ್ತು ಬಂಗಾರವನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಸಂಜೆಯ ತನಕ ಗೆಳೆಯರೊಂದಿಗೆ ಮಾತನಾಡಿದ್ದ ಅವರು ತಡರಾತ್ರಿ ತನ್ನ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ “ನಾನು ದೂರ ಹೋಗುತ್ತೇನೆ” ಎಂದು ಹೇಳಿ ಬಳಿಕ ಫೋನ್ ಸ್ವಿಚ್ ಆಫ್ ಮಾಡಿದ್ದರು.
ಸಮುದ್ರ ಕಿನಾರೆಯಲ್ಲಿ ಸುರೇಶ್ ಅವರು ಧರಿಸಿದ್ದ ಚಪ್ಪಲಿ ದೊರಕಿದ ಆಧಾರದಲ್ಲಿ ಸುರೇಶ ಅವರ ಕುಟುಂಬ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಸಮುದ್ರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.