ಬಿಕಿನಿ ಹಾಕಿಕೊಳ್ಳಿ ಎಂದು ಸಂದೇಶ ಕೊಡ್ತಿರಲ್ಲಾ, ನಾಚಿಕೆಯಾಗಬೇಕು : ಪ್ರಿಯಾಂಕಾ ವಿರುದ್ಧ ಮುತಾಲಿಕ್ ಕಿಡಿ – ಕಹಳೆ ನ್ಯೂಸ್
ಧಾರವಾಡ: ಶಾಲಾ ಆವರಣದಲ್ಲಿ ಬಿಕಿನಿ ಹಾಕಿಕೊಳ್ಳಿ ಎಂದು ಸಂದೇಶ ಕೊಡ್ತಿರಲ್ಲಾ, ನಿಮಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಧಾರವಾಡದಲ್ಲಿ ಹಿಜಬ್ ಕುರಿತು ಮಾತನಾಡಿದ ಅವರು, ಹಿಜಬ್ ವಿಚಾರ ಆರಂಭವಾಗಿದ್ದು, ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರಿಂದ. ಅವರು ಆವಾಗಲೇ ವಿದ್ಯೆಗೆ ಮಹತ್ವ ಕೊಡುತ್ತೇವೆ ಹಿಜಬ್‍ಗೆ ಅಲ್ಲ ಅಂತಾ ಯೋಚನೆ ಮಾಡಿದ್ದರೆ ಇಷ್ಟು ಬೆಳವಣಿಗೆ ಆಗುತ್ತಿರಲಿಲ್ಲ. ಉಡುಪಿ ಕಾಲೇಜ್ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಇಷ್ಟು ದೊಡ್ಡಗಾಗುತ್ತಿರಲಿಲ್ಲ. ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕು. ಅದು ನಮ್ಮ ಧರ್ಮ, ಅದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಇವತ್ತಿನ ದಿನ ಪ್ರಿಯಾಂಕಾ ಗಾಂಧಿ ಒಂದು ಟ್ವೀಟ್ ಮಾಡಿದ್ದಾರೆ. ಮಹಿಳೆಯರಿಗೆ ಸ್ವತಂತ್ರ ಕೊಡಬೇಕು. ಹಕ್ಕು ಕೊಡಬೇಕು ಎಂದಿದ್ದಾರೆ. ಜಿನ್ಸ್ ಹಾಕ್ಕೊಬಹುದು, ಬಿಕಿನಿ ಹಾಕಿಕೊಳ್ಳಬಹುದು ಎಂದು ಅವರು ಉಲ್ಲೇಖ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರೆ ದೊಡ್ಡ ಸ್ಥಾನದಲ್ಲಿ ಇದ್ದಿರಾ, ನೀವು ಇವತ್ತು ಶಾಲಾ ಆವರಣದಲ್ಲಿ ಬಿಕಿನಿ ಹಾಕಿಕೊಳ್ಳಿ ಎಂದು ಸಂದೇಶ ಕೊಡ್ತಿರಲ್ಲ ಎಂದು ಕಿಡಿಕಾರಿದರು. ಈ ರೀತಿ ಹೇಳಿಕೆ ಕೊಡುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಇದು ಮಹಿಳೆಯರಿಗೆ ಅವಮಾನ ಮಾಡುವಂತದ್ದು, ಇದನ್ನ ನಾನು ಖಂಡಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು.
ಪಾಕಿಸ್ತಾನ ಕೂಡಾ ನಮ್ಮ ದೇಶದ ಹಿಜಬ್ ವಿಷಯದಲ್ಲಿ ಮೂಗು ತುರಿಸುತ್ತಿದೆ. ಅದಕ್ಕೆ ಇದರ ಅವಶ್ಯಕತೆ ಇಲ್ಲ. ಪಾಕಿಸ್ತಾನ ಇಡೀ ಜಗತ್ತಿನಲ್ಲಿ ಭಯೋತ್ಪಾದನೆ ದೇಶ. ಅಲ್ಲಿ ಮಹಿಳೆಯರಿಗೆ ಯಾವ ಸ್ಥಾನ ಕೊಟ್ಟಿದ್ದಾರೆ ಎಂದು ಈ ರೀತಿ ಮಾತನಾಡುತ್ತಾರೆ. ಗುಂಡು ಹೊಡೆಯುತ್ತೀರಿ, ಬುರ್ಕಾ ಹಾಕಿ ಒಡಾಡಿಸುತ್ತೀರಿ, ಮಕ್ಕಳನ್ನ ಹಡಿಯುವ ಮಷಿನ್ ತರಾ ನೀವು ಮಹಿಳೆಯರನ್ನು ನಡೆಸಿಕೊಳ್ತಿರಿ. ನೀವು ನಮಗೆ ಉಪದೇಶ ಮಾಡುವಂತಹ ಅವಶ್ಯಕತೆ ಇಲ್ಲ ಎಂದು ಎಚ್ಚರಿಕೆ ಕೊಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದ ಕಾಲೇಜಿನಲ್ಲಿ ಮುಸ್ಲಿಂ ಹುಡುಗಿ ‘ಅಲ್ಲಾಹು ಅಕ್ಬರ್’ ಎಂದಿದ್ದಕ್ಕೆ ಅವಳನ್ನು ಹಿರೋಯಿನ್ ಮಾಡಲು ಹೊರಟಿದ್ದೀರಿ. ಈ ರೀತಿ ಪ್ರಚೋದನೆ ಮಾಡಿ ಮಾನಸಿಕವಾಗಿ ವಿಷ ಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಅದೇ ಮಾನಸಿಕ ಸ್ಥಿತಿ ಇರುವವರು 5 ಲಕ್ಷ ಘೋಷಣೆ ಮಾಡಿದ್ದಾರೆ ಎಂದರು.
ಮುಸ್ಲಿಂ ಮಹಿಳೆಯರಿಗೆ ಈ ರೀತಿ ಬೆಳೆಯಿರಿ ಎಂಬ ಮಾನಸಿಕ ಸ್ಥಿತಿ ಬೆಳೆಸುವುದನ್ನು ನಾನು ವಿರೋಧ ಮಾಡುತ್ತೇನೆ ಎಂದ ಮುತಾಲಿಕ್, ಮೈಸೂರಿನಲ್ಲಿ ಎಸ್‍ಡಿಪಿಐ ಕಾರ್ಯಕರ್ತ ನನ್ನ ವೈಯಕ್ತಿಕ ವಿಷಯ ಮಾತನಾಡಿದನ್ನು ಖಂಡಿಸುತ್ತೇನೆ. ಎಸ್‍ಡಿಪಿಐ ಕಾರ್ಯದರ್ಶಿಗೆ ಬಾಯಿ ಮುಚ್ಚಲು ಹೇಳುತ್ತೇನೆ ಎಂದು ವಿರೋಧ ವ್ಯಕ್ತಪಡಿಸಿದರು.
Whether it is a bikini, a ghoonghat, a pair of jeans or a hijab, it is a woman’s right to decide what she wants to wear.
— Priyanka Gandhi Vadra (@priyankagandhi) February 9, 2022
This right is GUARANTEED by the Indian constitution. Stop harassing women. #ladkihoonladsaktihoon
ನಾನು ಈ ದೇಶಕ್ಕೆ 40 ವರ್ಷಗಳಿಂದ ಹಿಂದುತ್ವಕ್ಕಾಗಿ ಕೆಲಸ ಮಾಡಿದವನು. ನೀವು ಈ ರೀತಿ ಮಾತನಾಡಿದರೆ ನಿಮ್ಮನ್ನ ಬಿಡಲ್ಲ. ನೂರಕ್ಕೆ ನೂರು ಪಿಎಫ್‍ಐ ಹಾಗೂ ಎಸ್‍ಡಿಪಿಐ ಮೂಲಭೂತವಾದಿಗಳು ಇಂಥ ಘಟನೆಗಳಿಗೆ ಕಾರಣಿಕರ್ತರು ಎಂದು ಆರೋಪಿಸಿದರು.
ಭಾರತ ಕ್ರಿಕೆಟ್‍ನಲ್ಲಿ ಸೋತ ಸಮಯದಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕ್ತಾರೆ. ಕಾಶ್ಮೀರ ವಿದ್ಯಾರ್ಥಿಗಳು ಘೋಷಣೆ ಹಾಕಿದ್ದು, ಇದರ ಹಿಂದೆ ಪ್ರತ್ಯೇಕವಾದ ಕೆಲಸ ಮಾಡುತ್ತಿದೆ. ಪ್ರಚೋದನೆ ಕೆಲಸ ಮಾಡುತ್ತಿದೆ. ಇವರ ಪ್ರಾರಂಭ ವಿದ್ಯಾರ್ಥಿನಿಯರ ಮೂಲಕ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರನ್ನ ಬಲಿಪಶು ಮಾಡುತ್ತಿದ್ದಾರೆ ಎಂದು ಹೇಳಿದರು.