ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದು ಹತ್ತು ದಿನಗಳ ಮೇಲಾದರೂ ಸಚಿವ ಸಂಪುಟ ರಚನೆಯಾಗಿರಲಿಲ್ಲ. ಮೊದಲಿಗೆ ಪ್ರಮುಖ ಖಾತೆಗಳಿಗಾಗಿ ಹಗ್ಗಜಗ್ಗಾಟ ನಡೆದಿದ್ದು, ಇದು ಬಗೆಹರಿದ ಬಳಿಕ ಉಭಯ ಪಕ್ಷಗಳಲ್ಲಿ ಸಚಿವರಾಗಲು ಪೈಪೋಟಿ ನಡೆದಿತ್ತು.
ಕಡೆಗೂ ಈ ಬಿಕ್ಕಟ್ಟು ಬಗೆಹರಿದಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಪಟ್ಟಿಯಲ್ಲಿ ಹಲವು ಹಿರಿಯ ನಾಯಕರಿಗೆ ಕೊಕ್ ನೀಡಲಾಗಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ.
ಜೆಡಿಎಸ್ ನಲ್ಲೂ ಸಚಿವ ಸ್ಥಾನ ವಂಚಿತರು ಒಳಗೊಳಗೆ ಅಸಮಾಧಾನಗೊಂಡಿರುವರಾದರೂ ಪಕ್ಷದ ವರಿಷ್ಠ ದೇವೇಗೌಡರ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಮೇಲ್ನೋಟಕ್ಕೆ ಹೇಳುತ್ತಿದ್ದಾರೆ.
ಉಭಯಪಕ್ಷಗಳ ನೂತನ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಆಕ್ರೋಶ ಸ್ಫೋಟಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕೆಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದ್ದಾರೆನ್ನಲಾಗಿದೆ. ಹೀಗಾಗಿ ಮೈತ್ರಿಕೂಟ ಸರ್ಕಾರದ ಮುಂದಿನ ದಿನಗಳು ಕಠಿಣವಾಗಿರಲಿದೆ ಎನ್ನಲಾಗಿದ್ದು, ಅತೃಪ್ತರ ಅಸಮಾಧಾನ ಶಮನಗೊಳಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.